ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ಕರಾವಳಿ ಪ್ರದೇಶದಲ್ಲಿ ವ್ಯಾಪಕ ವಿರೋಧ ಕೇಳಿಬಂದಿದ್ದರೂ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಈ ಯೋಜನೆಯ ಸ್ಥಗಿತದ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ಹಾಗೂ ಕಾನೂನಾತ್ಮಕ ತೊಡಕುಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಯ ಹೋರಾಟಗಾರರು ಹಾಗೂ ಫಲಾನುಭವಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲಯ ಪ್ರಮುಖರ ಸಭೆ ಕರೆದು ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಈಗಾಗಲೇ 1,200 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದೆ. ಪ್ರಸಕ್ತ ವರ್ಷವೂ ಮುಂಗಡ ಪತ್ರದಲ್ಲಿ ಒಂದಿಷ್ಟು ಹಣ ಕಾಯ್ದಿರಿಸಲಾಗಿದೆ. ಕೆಲವು ಭಾಗದಲ್ಲಿ ಯೋಜನೆ ಕಾರ್ಯ ನಡೆದಿದೆ. ಈ ಮಧ್ಯೆ ಕಾನೂನು ಹೋರಾಟ ಎದುರಾಗಿರುವುದರಿಂದ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕಾನೂನು ಹೋರಾಟ ಮುಂದುವರೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.