ಬೆಂಗಳೂರು:ನಗರದ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಗೆ ಹೊಂದಿಕೊಂಡಿರುವ ಜೈನ್ ಇನ್ಸ್ಟಿಟ್ಯೂಟ್ ಆಪ್ ವ್ಯಾಸ್ಕುಲಾರ್ ಸೈನ್ಸ್ (ಜೆಐವಿಎಎಸ್)ನ ವೈದ್ಯರು ಅತ್ಯಂತ ವಿರಳ ಹಾಗೂ ಕ್ಲಿಷ್ಟಕರವಾಗಿದ್ದ ವ್ಯಾಸ್ಕುಲಾರ್ ಮತ್ತು ಎಂಡೋ ವ್ಯಾಸ್ಕುಲಾರ್ ಎಂಬ ಹೈಬ್ರಿಡ್ ತಂತ್ರಜ್ಞಾನ (ಹೃದಯಕ್ಕೆ ಯಾವುದೇ ಸಂಬಂಧವಿಲ್ಲ) ಅಳವಡಿಸಿದ ಶಸ್ತ್ರಚಿಕಿತ್ಸೆ ಮೂಲಕ ಪಾಕಿಸ್ತಾನದ ರೋಗಿಯೊಬ್ಬರಿಗೆ ಮರುಜೀವ ನೀಡಿದ್ದಾರೆ.
ಪಾಕಿಸ್ತಾನದ 39 ವರ್ಷದ ಅನ್ವರ್ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ 2008ರಲ್ಲಿ ತೀವ್ರ ಎದೆ ಹಾಗೂ ಬೆನ್ನು ನೋವು ಕಾಣಿಸಿಕೊಂಡಿದೆ. ಅತಿ ರಕ್ತದೊತ್ತಡದಿಂದ ರೋಗಿಯು ಬಳಲುತ್ತಿದ್ದರು. ಹೀಗಾಗಿ ಪಾಕಿಸ್ತಾನದ ಕರಾಚಿಯ ಸ್ಪತ್ರೆಯೊಂದರಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರಬಹುದು ಎಂದು ಎಲ್ಲಾ ರೀತಿಯ ತಪಾಸಣೆ ನಡೆಸಲಾಯಿತು. ಆದರೆ ಹೃದಯಾಘಾತದ ಯಾವ ಲಕ್ಷಣವೂ ತಪಾಸಣೆ ವೇಳೆ ಕಂಡುಬರಲಿಲ್ಲ. ನಂತರ ಸಿಟಿ ಸ್ಕ್ಯಾನ್ ಮಾಡಲಾಯಿತು. ಅದರ ಮೂಲಕ ರೋಗಿಯು ಅರೋಟಿಕ್ ಡಿಸೆಕ್ಷನ್–ಟೈಪ್ ಬಿ ಎಂಬ ಅತ್ಯಂತ ಅಪಾಯಕಾರಿ ಸಮಸ್ಯೆಯಿಂದ ಬಳಲುತ್ತಿರುವುದು ಗೋಚರಿಸಿತು. ದೇಹದ ಅಂಗಾಂಗಗಳಿಗೆ ಶುದ್ಧರಕ್ತವನ್ನು ಪೂರೈಸುವ ಅಯೋರ್ಟಾ ಎಂಬ ರಕ್ತನಾಳವು ಎರಡು ಭಾಗವಾಗಿರುವುದು ಕಂಡುಬಂತು. ಅದು ಎದೆಯಿಂದ ಕೆಳ ಹೊಟ್ಟೆಯವರೆಗೂ ವಿಸ್ತರಿಸಿತ್ತು. ಅಲ್ಲಿಂದ ಅದು ಎರಡೂ ಕಾಲಿಗಳಿಗೆ ವಿಸ್ತರಿಸಿತ್ತು. ಇದೊಂದು ಅತ್ಯಂತ ಕ್ಲಿಷ್ಟಕರ ಸಂಗತಿಯಾಗಿತ್ತು. ಮೊದಲು ಈ ಸಮಸ್ಯೆಗೆ ಕಾರಣವಾಗಿರುವ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಪ್ರಯತ್ನಿಸಲಾಯಿತು. ಇದರಿಂದ ಸಮಸ್ಯೆ ಒಂದು ಹಂತಕ್ಕೆ ಹತೋಟಿಗೆ ಬಂತು. ನಂತರ ಸಮಸ್ಯೆ ಪರಿಹಾರಕ್ಕೆ ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಗಿತ್ತು. ಕನಿಷ್ಠ ತೆರೆದ ಎಂಡೋವ್ಯಾಸ್ಕುಲಾರ್ ಕ್ರಿಯೆ ಮೂಲಕ ಸ್ಟಂಟ್ ಅಳವಡಿಸುವುದು ಎಂದು ತೀರ್ಮಾನಿಸಲಾಯಿತು. ಇದಕ್ಕೆ ಅಮೆರಿಕ ಅಥವಾ ಬೆಂಗಳೂರಿನ ಜೆಐವಿಎಎಸ್ಗೆ ಹೋಗುವಂತೆ ಕರಾಚಿಯಲ್ಲಿ ಸಲಹೆ ನೀಡಲಾಯಿತು.
ಅದರಂತೆಯ ಇಲ್ಲಿಗೆ ಬಂದ ಅನ್ವರ್ ಅವರಿಗೆ ಜೆಐವಿಎಎಸ್ ವೈದ್ಯರದ ವ್ಯಾಸ್ಕುಲಾರ್ ತಜ್ಞ ಹಾಗೂ ಸಂಸ್ಥೆ ನಿರ್ದೇಶಕ ಡಾ.ಕೆ.ಆರ್.ಸುರೇಶ ಅವರು ಡಾ.ವಿವೇಕಾನಂದ ಹಾಗೂ ಡಾ. ವಿಷ್ಣು ಮತ್ತು ಡಾ.ಸುಮಂತ್ ರಾಜ್ ಅವರನ್ನು ಒಳಗೊಂಡ ತಂಡ ರಚಿಸಿ ಈ ಕ್ರಿಯೆ ನಡೆಸಲು ಮುಂದಾದರು. ನ. 9ರಂದು ಆಸ್ಪತ್ರಗೆ ಬಂದ ಅನ್ವರ್ ಅವರಿಗೆ ಮತ್ತೊಮ್ಮೆ ಸಿಟಿ ಸ್ಕ್ಯಾನ್ ನಡೆಸಿದಾಗ ಅಯೋರ್ಟಾದಲ್ಲಿನ ಸಮಸ್ಯೆ ಇರುವುದು ಸ್ಪಷ್ಟವಾಯಿತು. ಎದೆ ಭಾಗದಲ್ಲಿ ರಕ್ತನಾಳದಲ್ಲಿ ಊತದ ಪ್ರಮಾಣ ಹೆಚ್ಚಾಗಿತ್ತು. ಅದರಂತೆಯೇ ಶ್ವಾಸಕೋಶದ ಬಳಿ ರಕ್ತನಾಳದಲ್ಲಿ ರಕ್ತದ ಹರಿವು ಸ್ಥಗಿತಗೊಂಡಿರುವುದು ಪತ್ತೆಯಾಯಿತು. ರಕ್ತನಾಳದ ವಿಭಾಗವಾಗಿದ್ದರಿಂದ ಆರ್ಟರಿ ಮೂಲಕ ಕರುಳು ಹಾಗೂ ಎರಡೂ ಮೂತ್ರಪಿಂಡಗಳಿಗೆ ರಕ್ತ ಪೂರೈಕೆ ಕಡಿಮೆಯಾಗಿ ಅವುಗಳ ಗಾತ್ರ ಸಂಕುಚಿತಗೊಂಡಿತ್ತು. ಹೀಗಾಗಿ ಎರಡು ಹಂತದ ಕ್ರಿಯೆ ನಡೆಸಬೇಕಾದ ಅಗತ್ಯದ ಅರಿವಾಯಿತು. ಮೊದಲು ಕರುಳಿಗೆ ರಕ್ತ ಪೂರೈಕೆ ಮಾಡಲು ಇರುವ ಮತ್ತೊಂದು ಮಾರ್ಗವನ್ನು ಸಿದ್ಧಪಡಿಸಲು ವೈದ್ಯರ ತಂಡ ತೀರ್ಮಾನಿಸಿತು. ಅತಿ ದೊಡ್ಡದಾದ ತೆರೆದ ಶಸ್ತ್ರಕ್ರಿಯೆ ಇದಾದ್ದರಿಂದ ಅಯೋರ್ಟಾ ಒಳಗಿನ ಭಾಗಕ್ಕೆ ಲೋಹ ಹಾಗೂ ಅದನ್ನು ವಿಶೇಷ ಬಟ್ಟೆಯಿಂದ ಸುತ್ತಿದ ಸ್ಟಂಟ್ ಬಳಸಿ ರಕ್ತ ಸೋರುವುದನ್ನು ಹಾಗು ಅದು ಯಾವುದೇ ಘಾಸಿಯಾಗದಂತೆ ಎಚ್ಚರವಹಿಸಲು ಡಾ.ವಿವೇಕಾನಂದ ಅವರ ನೇತೃತ್ವದ ವೈದ್ಯರ ತಂಡ ತೀರ್ಮಾನಿಸಿತು. ಈ ಕ್ರಿಯೆ ಮೂಲಕ ಕಾಲಿನ ರಕ್ತನಾಳವನ್ನು ಪಡೆದು ಕರುಳು ಹಾಗೂ ಯಕೃತ್ಗೆ ರಕ್ತ ಪೂರೈಕೆ ಮಾಡಲು ಬೈಪಾಸ್ ಷ್ಟಿಸಲಾಯಿತು. ಶಸ್ತ್ರಕ್ರಿಯೆ ನಡೆಸಿದ ಒಂದು ವಾರದ ವಿಶ್ರಾಂತಿಯ ನಂತರ ಕನಿಷ್ಠ ತೆರೆದ ಶಸ್ತ್ರಚಿಕಿತ್ಸೆ ನಡೆಸ ಸ್ಟಂಟ್ ಅಳವಡಿಸಲಾಯಿತು. ಇದರ ಮೂಲಕ ಕರುಳು ಹಾಗೂ ಮೂತ್ರಪಿಂಡಕ್ಕೆ ಅಗತ್ಯ ರಕ್ತ ಪೂರೈಕೆ ಸುಗಮವಾಗಿ ಹರಿಯುವಂತೆ ಮಾರ್ಗ ರೂಪಿಸಲಾಯಿತು. ಇದಾದ ಕೆಲವೇ ದಿನಗಲಲ್ಲಿ ಅನ್ವರ್ ಚೇತರಿಸಿಕೊಳ್ಳಲು ಅರಂಭಿಸಿದರು. ಕೆಲವೇ ದಿನಗಳಲ್ಲಿ ಸಹಜ ಜೀವನದತ್ತ ಮರಳಿದರು. ಸಾಮಾನ್ಯ ಊಟ ಮಾಡಲು, ನಡೆದಾಡಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಡಾ.ವಿವೇಕಾನಂದ ಹೇಳಿದರು.