ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಜನ ಮೋದಿಯನ್ನು ಗೆಲ್ಲಿಸಿರುವುದು ವಿದೇಶ ಸುತ್ತಲಿ ಎಂದಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಲು ಪಕ್ಷ ನಿರ್ಧರಿಸಿದ್ದು, ಜನತಾ ಪರಿವಾರ ಒಗ್ಗೂಡಲು ಶ್ರಮಿಸಲಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರ ನೇತೃತ್ವದಲ್ಲಿ ಜನತಾ ಪರಿವಾರವನ್ನು ಒಂದುಗೂಡಿಸುವ ಚಿಂತನೆ ಹಿಂದೆಯೇ ಇತ್ತು. ಆದರೆ ಇದೀಗ ಕಾಲ ಕೂಡಿ ಬಂದಿದೆ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ದೂರವಿದ್ದು, ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದ ಅವರು, ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಸೆಣಸಲಿದೆ ಜನವಿರೋಧಿ ಧೋರಣೆಯ ಪಕ್ಷಗಳ ಜತೆ ಮೈತ್ರಿ ಸಾಧ್ಯವಿಲ್ಲ ಎಂದರು.
ಬಹಳ ನಿರೀಕ್ಷೆಯೊಂದಿಗೆ ಜನ ಮೋದಿ ಅವರನ್ನು ಗೆಲ್ಲಿಸಿದರು. ಬಿಜೆಪಿಯನ್ನು ಗೆಲ್ಲಿಸಿದರು. ಹೀಗೆ ಗೆದ್ದವರಿಗೆ ಚುನಾವಣಾ ಆಯೋಗ ಸರ್ಟಿಫಿಕೇಟು ನೀಡಿತು. ಆದರೆ ಮೋದಿ ಅವರಿಗೆ ಸರ್ಟಿಫಿಕೇಟು ದೊರೆತಿದ್ದು ಜನ ಸೇವೆ ಮಾಡಲೇ ಹೊರತು, ವಿದೇಶ ಸುತ್ತುವುದಕ್ಕೆ ಅಲ್ಲ ಎಂದು ಕಿಡಿಕಾರಿದರು.