ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ 12 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಕಾಣಿಸಿಕೊಂಡಿದೆ.
ತುಮಕೂರು ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ವಿಧಾನಪರಿಷತ್ತಿನ ಹಾಲಿ ಸದಸ್ಯರೂ ಆಗಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಹುಲಿನಾಯ್ಕರ್ ಪಕ್ಷಕ್ಕೆ ಗುಡ್ಬೈ ಹೇಳಿ ಬಿಜೆಪಿ ಸೇರಿ ಆ ಪಕ್ಷದಿಂದ ಕಣಕ್ಕೆ ಇಳಿಯುತ್ತಿರುವುದು, ಕೋಲಾರ ಕ್ಷೇತ್ರದಲ್ಲಿ ಸಿ.ಆರ್.ಮನೋಹರ್ಗೆ ಟಿಕೆಟ್ ಕೊಟ್ಟಿರುವುದಕ್ಕೆ ಅಲ್ಲಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸಗೌಡ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿರುವುದು ಹಾಗೂ ಮಂಡ್ಯದಲ್ಲಿ ಹಾಲಿ ಸದಸ್ಯ ಬಿ.ರಾಮಕೃಷ್ಣ ಹಾಗೂ ಅಪ್ಪಾಜಿಗೌಡ ನಡುವೆ ತೀವ್ರ ಪೈಪೋಟಿ ನಡೆದಿರುವುದು ಪಕ್ಷದಲ್ಲಿನ ಭಿನ್ನಮತಕ್ಕೆ ಕಾರಣವಾಗಿದೆ. ಹೀಗಾಗಿ, ಯಾವುದೇ ಗೊಂದಲಗಳಿಲ್ಲದ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿರುವ ಜೆಡಿಎಸ್ ಪಕ್ಷ, ಉಳಿದ ಕ್ಷೇತ್ರಗಳಿಗೆ ತೀರಾ ಅಳೆದೂ ತೂಗಿ,ಭಿನ್ನಮತಕ್ಕೆ ಅವಕಾಶ ನೀಡದೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತ ಅಭ್ಯರ್ಥಿಗಳು ಪಕ್ಷಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಪಕ್ಷದ ಮುಖಂಡರು ಇದ್ದಾರೆ.
ಬೆಂಗಳೂರು ನಗರ ಕ್ಷೇತ್ರ ಟಿಕೆಟ್ ವಂಚಿತರಾದ ಹಾಲಿ ಸದಸ್ಯ ದಯಾನಂದ ರೆಡ್ಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡದಿಂದ ಸ್ಪರ್ಧೆ ಬಯಸಿ, ಟಿಕೆಟ್ ವಂಚಿತರಾಗಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕೂಡ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಶ್ ಹಾಲಿ ಸದಸ್ಯ ಹುಲಿನಾಯ್ಕರ್ ಸ್ಪರ್ಧಿಸಲಿದ್ದಾರೆ. ಚಿಕ್ಕಬಳ್ಳಾಪುರ- ಕೋಲಾರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ರಮೇಶ್ ಕುಮಾರ್, ಹಿರಿಯ ನಾಯಕ ಆರ್.ಎಲ್. ಜಾಲಪ್ಪ ಸೇರಿದಂತೆ ಅನೇಕ ನಾಯಕರು ತಮ್ಮವರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಗೊಂದಲ ವಿಪರೀತಕ್ಕೆ ಹೋಗಿದೆ.