ಬೆಂಗಳೂರು: ರಾಜ್ಯಾದ್ಯಂತ 2500 ಕ್ಕೂ ಹೆಚ್ಚು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಅವುಗಳ ಸುತ್ತ ತಂತಿಬೇಲಿ ಹಾಕುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2559 ಕೆರೆಗಳನ್ನು ಸಂರಕ್ಷಿಸುವ ಕಾರ್ಯ ಆರಂಭವಾಗಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಫೆಬ್ರವರಿ ಒಂದರ ವೇಳೆಗೆ ಕಾರ್ಯಾದೇಶ ನೀಡಲಾಗುವುದು.
ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ 2559 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭವಾದ ನಂತರ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಅಭಿವೃದ್ದಿಪಡಿಸುವ ಕೆರೆಗಳನ್ನು ಈಗಾಗಲೇ ಗುರುತಿಸಲಾಗಿದ್ದು ಊರ ಹೊರಗಿರುವ ಕೆರೆಗಳನ್ನು ರಕ್ಷಿಸಲು ಕೆರೆಯ ಸುತ್ತ ಗುಂಡಿ ತೋಡುವಂತೆ ಸೂಚನೆ ನೀಡಲಾಗಿದೆ.
ಊರಿಗೆ ಸಮೀಪವಿರುವ ಕೆರೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅವುಗಳ ಸುತ್ತ ತಂತಿ ಬೇಲಿ ಹಾಕಲಾಗುವುದು. ಕೆರೆ ಒತ್ತುವರಿ ಕಾರ್ಯ ಯಾರಿಂದಲೇ ನಡೆದಿರಲಿ ಅದನ್ನು ತೆರವು ಮಾಡಿಸಲಾಗುವುದಾಗಿ ಹೇಳಿದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು ವ್ಯಾಪಕ ಬರಗಾಲ ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕೆರೆಗಳನ್ನು ಸಂರಕ್ಷಿಸಿದರೆ ಅಂತರ್ಜಲದ ಪ್ರಮಾಣ ಏರುವುದಷ್ಟೇ ಅಲ್ಲ. ಅದರಿಂದ ಜನ ನೀರಿಗಾಗಿ ಪಡುವ ಬವಣೆ ಕಡಿಮೆಯಾಗುತ್ತದೆ. ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಧ್ಯಕ್ಕೆ 90.95 ಕೋಟಿ ರೂ ಒದಗಿಸಲಾಗುವುದು ಎಂದು ಹೇಳಿದರು.