ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ವಿದೇಶಿ ಬಂಡವಾಳ ಹೂಡಿಕೆಗೆ ವಿದೇಶ ಪ್ರವಾಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಮೋದಿಯ ವಿದೇಶ ಪ್ರವಾಸದಲ್ಲಿ ಯಾವುದೇ ತಪ್ಪಿಲ್ಲ. ಮೊದಲನೆಯದಾಗಿ ದೇಶಕ್ಕೆ ಬಂಡವಾಳ ಹರಿದು ಬರಬೇಕು. ಆ ಮೂಲಕ ಉದ್ಯಮಗಳು ಬೆಳೆಯಬೇಕು. ಹಾಗಿದ್ದರೆ ತಾನೇ ನಮ್ಮ ಯುವಕ, ಯುವತಿಯರಿಗೆ ಉದ್ಯೋಗ ಸಿಗುವುದು? ಮೋದಿ ಡೌನ್ ಟು ಅರ್ಥಿ ನಾಯಕ. ಹೀಗಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ವಿಧಾನಪರಿಷತ್ ಚುನಾವಣೆಯ ಕುರಿತು ಮಾತನಾಡಿ ಪಕ್ಷದಲ್ಲಿದ್ದ ಭಿನ್ನಮತ ಶಮನಗೊಂಡಿದ್ದು, ಒಗಟ್ಟಿನಿಂದ ಕೆಲಸ ಮಾಡಿ, ಹತ್ತು ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸ ಹೊರಗೆಡವಿದರು. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹಣ ಬಲದ ಎದುರು ಜೆಡಿಎಸ್ ಗೆ ಕಷ್ಟವಾಗಬಹುದು. ಆದರೆ ಕಾರ್ಯಕರ್ತರು, ಮುಖಂಡರ ಬಲ ನಮಗಿದ್ದು, ಐಕ್ಯತೆಯಿಂದ ಹೋದರೆ ಗೆಲುವು ನಮ್ಮದೇ ಎಂದರು.