ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳು ಅಭಿವೃದ್ಧಿ ಕಾರ್ಯವನ್ನು ನಿಗದಿತ ರೀತಿಯಲ್ಲಿ ಮಾಡದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಪ್ರಸ್ತುತ ಆಯವ್ಯಯದಲ್ಲಿ ನಿಗದಿಯಾದ ವೆಚ್ಚ ಮಾಡದಿರುವುದರ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಗಳ ಅಸಡ್ಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವಿವಿಧ ಯೋಜನೆಗಳಿಗೆ ನಿಗದಿಯಾದ ಹಣವನ್ನು ಪ್ರತಿವರ್ಷ ವೆಚ್ಚ ಮಾಡಬೇಕು ಈ ವಿಚಾರದಲ್ಲಿ ನಿರ್ಲಕ್ಷ್ಯತೆ ಸಲ್ಲದು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸರ್ಕಾರದ 18 ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದ ಅವರು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮಕ್ಕೆ ಆಯವ್ಯಯದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಒದಗಿಸಿದ್ದರೂ ಈವರೆಗೆ ಕೇವಲ 32 ಕೋಟಿಯಷ್ಟು ಮಾತ್ರ ವೆಚ್ಚ ಮಾಡಿರುವುದಕ್ಕೆ ಸಿಡಿಮಿಡಿಗೊಂಡರು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2015-16ನೇ ಸಾಲಿಗೆ ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, ನವೆಂಬರ್ ವರೆಗೆ ಖರ್ಚಾಗಿರುವುದು ಕೇವಲ 32.74 ಕೋಟಿ ರೂ. ಮಾತ್ರ. ಶೇಕಡಾವಾರು ಪ್ರಗತಿ 0.03. 2013ರ ವಿಧಾನಸಭೆ ಚುನಾವಣೆಗೂ ಮುನ್ನ ಗುಲ್ಬರ್ಗ, ಬಳ್ಳಾರಿ, ಬೀದರ್, ರಾಯಚೂರು ಸೇರಿ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ 371ಜೆ ತಿದ್ದುಪಡಿ ಜಾರಿಗೆ ಬಂದಿತ್ತು. ಅದರಂತೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿ ಸಾವಿರ ಕೋಟಿ ರೂ. ಅನುದಾನವೂ ಬಿಡುಗಡೆಯಾಗಿದೆ. ಆದರೆ, ಅದರಲ್ಲಿ 9 ತಿಂಗಳು ಕಳೆದರೂ ಶೇ.1ರಷ್ಟು ಹಣ ಖರ್ಚು ಮಾಡಿಲ್ಲದಿರುದಕ್ಕೆ ಅಸಮಾಧಾನಗೊಂಡರಲ್ಲದೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಾಜ್ಯದ ಅಭಿವೃದ್ಧಿಗಾಗಿ ನೀಡಲಾಗುವ ಹಣವನ್ನು ವೆಚ್ಚ ಮಾಡಲು ಸಾಧ್ಯವಾಗದ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದರು. ವಿವಿಧ ಇಲಾಖೆಗಳ ನ್ಯೂನತೆಗಳನ್ನು ಎತ್ತಿಹಿಡಿದ ಮುಖ್ಯಮಂತ್ರಿ ನಿಗದಿತ ವೇಳೆಯಲ್ಲಿ ನಿಗದಿತ ಹಣವನ್ನು ಅಧಿಕಾರಿಗಳು ವೆಚ್ಚ ಮಾಡುವುದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಖಚಿತಪಡಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.