ಬೆಂಗಳೂರು: ಪಂಚಾಯತ್ ಕಾಯ್ದೆ ತಿದ್ದುಪಡಿ ಅನುಸಾರವೇ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ರಾಜ್ಯ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2016 ರ ಜನವರಿ ಮಾಸಾಂತ್ಯದಲ್ಲಿ ರಾಜ್ಯದ 30 ಜಿಲ್ಲಾ ಹಾಗೂ 176 ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ತಿದ್ದುಪಡಿ ತಂದಿರುವ ಪಂಚಾಯತ್ ಕಾಯ್ದೆ ಅನುಷ್ಠಾನಗೊಳಿಸುವಂತೆ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಕಳೆದ ವಿಧಾನ ಮಂಡಲ ಕಲಾಪದ ಸಂದರ್ಭದಲ್ಲಿ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಗೆ ಅಂಗೀಕಾರ ಪಡೆದ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯ ಪಾಲರು ಕಾಯ್ದೆ ತಿದ್ದುಪಡಿಗೆ ಅಂಗೀಕಾರ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ತಡೆಯುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ಮತ್ತು ಭೂ ಮಾಫಿಯಾ ಹತ್ತಿಕಲು ಹಾಲಿ ಇರುವ ಎರಡು ಕಾಯ್ದೆಗಳನ್ನು ಒಂದುಗೂಡಿಸಿ, ಹೊಸ ಕಾನೂನು ತರಲಾಗುವುದು ಎಂದು ಹೇಳಿದರು.
ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಸಂಬಂಧ ಇನ್ನೂ ಮಾತುಕತೆಗಳು ಮುಂದುವರಿದಿವೆ. ನಿಡುಮಾಮಿಡಿ ಸ್ವಾಮೀಜಿಯವರ ಬಳಿ ಚರ್ಚಿಸಿ ಸಮಾನ ಮನಸ್ಕರೊಂದಿಗೆ ಮಾತುಕತೆ ನಡೆಸಿ ಸಲಹೆ ನೀಡಲು ಕೋರಿದ್ದಾಗಿ ಹೇಳಿದ ಅವರು, ಜನರನ್ನು ಶೋಷಣೆಗೀಡು ಮಾಡುವ ಯಾವುದೇ ನಂಬಿಕೆ, ಮೂಢ ನಂಬಿಕೆಗಳನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.