ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಬುಧವಾರ ಬೆಳಗ್ಗೆ ಆರಂಭವಾಗಿದ್ದು ಹಲವು ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ 13 ಸ್ಥಾನ, ಬಿಜೆಪಿ 6 ಸ್ಥಾನ ಗೆಲುವು ಸಾಧಿಸಿದೆ.
14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, ಬಿಜೆಪಿ ನಾಲ್ಕು ಹಾಗೂ ಜೆಡಿಸ್ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬೆಂಗಳೂರು ನಗರ ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಗೆಲುವು ಸಾಧಿಸುವುದರೊಂದಿಗೆ ಆಡಳಿತರೂಢ ಕಾಂಗ್ರೆಸ್ ಪಕ್ಷ ಶುಭಾರಂಭ ಮಾಡಿದೆ. ಇನ್ನೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಗೆಲುವು ಸಾಧಿಸಿದ್ದಾರೆ.
ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರ(ದ್ವಿಸದಸ್ಯ)ದಲ್ಲಿ ಎರಡನೆ ಸ್ಥಾನಕ್ಕೆ ನಡೆದ ಎರಡನೆ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಈಗಾಗಲೇ ಗೆಲುವು ಸಾಧಿಸಿದ್ದಾರೆ. ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ಸುನೀಲ್ ಸುಬ್ರಮಣಿ 683 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.
ಕೋಲಾರ ವಿಧಾನಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಆರ್.ಮನೋಹರ್ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ನ ಎಂಎಲ್ ಅನಿಲ್ ಕುಮಾರ್ ಹಾಗೂ ಬಿಜೆಪಿಯ ರಾಮೇಗೌಡ ಪರಾಜಯಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್, ಪ್ರಸನ್ನ ಕುಮಾರ್ ಗೆಲುವಿನ ಹೊಸ್ತಿಲಿನಲ್ಲಿದ್ದಾರೆ. ಪ್ರಸನ್ನ ಕುಮಾರ್ 1,800 ಮತ ಗಳಿಸಿದ್ದಾರೆ, ಜೆಡಿಎಸ್ ನ ಎಚ್ ಎನ್ ನಿರಂಜನ್ 1366 ಮತ ಗಳಿಸಿ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ಹಾಲಿ ಅಭ್ಯರ್ಥಿ ಸಿದ್ದಾಮಣ್ಣ ಹಿನ್ನಡೆ.
ಮೈಸೂರು ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಆರ್.ಧರ್ಮಸೇನಾ ಜಯಭೇರಿ ಹಾಗೂ ಜೆಡಿಎಸ್ ನ ಸಂದೇಶ್ ನಾಗರಾಜ್ ಜಯಗಳಿಸಿದ್ದಾರೆ. ಬಿಜೆಪಿಯ ಆರ್ ರಘು ಕೌಟಿಲ್ಯ ಪರಾಜಯಗೊಂಡಿದ್ದಾರೆ.