ಮೈಸೂರು: ನಾಲ್ಕು ರೂಪಾಯಿ ಹಾಲಿನ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಬೇಡಿಕೆ ಇತ್ತು. ಅದನ್ನು ಜಾರಿ ಮಾಡಲಾಗಿದೆ ಅಷ್ಟೇ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳ ನಿಮಿತ್ತ ಮೈಸೂರಿನ ಮಂಡಕಳ್ಳಿ ವಿಮಾನಕ್ಕೆ ಬಂದಿಳಿದ ಸಿಎಂ ಸಿದ್ಧರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೇ ಹಾಲಿನ ದರ ಹೆಚ್ಚಳದ ಬೇಡಿಕೆ ಇತ್ತು. ಈ ಹಿನ್ನಲೆಯಲ್ಲಿ ನಾಲ್ಕು ರೂ. ಹೆಚ್ಚಿಸಲಾಗಿದೆ. ಅಲ್ಲದೆ ರೈತರಿಗೆ ಇದರಿಂದ 3 ರೂ ಲಾಭವಾಗಲಿದ್ದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಹಾಲಿದ ದರ ಕಡಿಮೆಯೇ ಇದೆ ಎಂದರು.
ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಉತ್ತರಿಸಿದ ಸಿಎಂ ಸಿದ್ಧು ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಪರಿಷತ್ ಚುನಾವಣೆಯಲ್ಲಿ ಇನ್ನೂ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿತ್ತು, ಅದು ಆಗಲಿಲ್ಲ ಎಂದರು.
ಜನಾರ್ಧನ್ ರೆಡ್ಡಿ ಮನೆ ಮೇಲೆ ಮತ್ತೆ ಲೋಕಾಯುಕ್ತ ದಾಳಿ ನಡೆಸಿರುವ ಬಗ್ಗೆ ರಾಜಕೀಯ ಪ್ರೇರಿತದಿಂದ ಈ ರೀತಿ ಲೋಕಾಯುಕ್ತದ ಮೇಲೆ ಒತ್ತಡ ಹೇರಿ ದಾಳಿ ನಡೆಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಶ್ರೀರಾಮಲು ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಶ್ರೀರಾಮುಲು ಓರ್ವ ಮಂತ್ರಿಯಾಗಿದ್ದವರು ಅವರಿಗೆ ಅಷ್ಟೂ ಜ್ಞಾನವಿಲ್ಲವೇ ಲೋಕಾಯುಕ್ತರು ಸರ್ಕಾರದ ಹಿಡಿತಕ್ಕೆ ಬರುವುದಿಲ್ಲ. ಇವೆಲ್ಲಾ ರಾಜಕೀಯ ಪ್ರೇರಿತ ಹೇಳಿಕೆ ಎಂದರು.
ಹಾಸನದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಮೊದಲೇ ಕಾರ್ಯಕರ್ತರು ತಿಳಿಸಿದ್ದರು. ಆದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧು ಅವರ ಶಕ್ತಿ ಇರುವುದು ಅಲ್ಲೇ ಎಂದು ವ್ಯಂಗ್ಯವಾಡಿದರು.