ಬೆಂಗಳೂರು: ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸಂಭವಿಸಿದ ಗ್ರೆನೇಡ್ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಬೆಂಗಳೂರಿನಲ್ಲಿರುವ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶ್ರದ್ಧಾಂಜಲಿ ಅರ್ಪಿಸಿದರು.
ಬೆಂಗಳೂರಿನ ವಿದ್ಯಾರಣ್ಯಪುರ ರಸ್ತೆಯಲ್ಲಿರುವ ಬಿಇಎಲ್ ಶಾಲಾ ಮೈದಾನದಲ್ಲಿ ಹುತಾತ್ಮ ಯೋಧ ನಿರಂಜನ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ ಅವರು ನಿರಂಜನ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ, ಹುತಾತ್ಮ ನಿರಂಜನ್ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಅಲ್ಲದೇ 30 ಲಕ್ಷ ರೂ. ಪರಿಹಾರ ಘೋಷಿಸಿರುವುದಾಗಿ ತಿಳಿಸಿದರು.
ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಹತ್ತಿರದ ಎಳಂಪಿಲಶ್ಶೇರಿ ಮೂಲದವರಾದ ನಿರಂಜನರ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ನಾಳೆ ಪಾಲಕ್ಕಾಡ್ ನಲ್ಲಿ ನಿರಂಜನ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.