ಬೆಂಗಳೂರು: ಸರ್ಕಾರ ಹಾಲಿನ ಬೆಲೆ 4 ರೂ ಹೆಚ್ಚು ಮಾಡಿರುವುದನ್ನು ಖಂಡಿಸಿರುವ ಕರ್ನಾಟಕ ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್, ಹಣದಲ್ಲಿ ಸಂಸ್ಥೆಯ ಆಡಳಿತ ವೆಚ್ಚಕ್ಕೆ ಬಳಕೆ ಮಾಡಿ ಉಳಿದರೆ ಅದನ್ನು ರೈತರಿಗೆ ನೇರವಾಗಿ ತಲುಪಿಸಬೇಕೆಂದು ಸರ್ಕಾರ ತೀರ್ಮಾನಿಸಿರುವುದು ರೈತರಿಗೆ ಮಾಡಿದ ಅಪಮಾನ ಎಂದು ಕಟುವಾಗಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಉತ್ಪಾದನಾ ವೆಚ್ಚ ಮತ್ತು ನಷ್ಟವನ್ನು ಸರಿದೂಗಿಸಲು ಯಾವಾಗಲೂ ಸರ್ಕಾರ ಪ್ರಯತ್ನ ಮಾಡುವುದಿಲ್ಲ. ಪಂಜಾಬ್ ನಲ್ಲಿ ರೈತರಿಗೆ ಒಂದು ಲೀಟರಿಗೆ 50 ರೂ ನೀಡುತ್ತಿದ್ದಾರೆ. ಆಂಧ್ರ ಹಾಗೂ ತಮಿಳುನಾಡುಗಳಲ್ಲಿ 39-40 ರೂಗಳು ನೀಡುತ್ತಿದ್ದಾರೆ. ಆದರೆ ಅದು ಒಂದು ಲೀಟರ್ ನೀರಿನ ಬೆಲೆ ಕೂಡ ಅಲ್ಲ. ಸಕರ್ಾರ ಇಲ್ಲಿ ಗ್ರಾಹಕರ ಜೇಬಿಗೂ ಕತ್ತರಿ ಹಾಕಿ, ರೈತರಿಗೂ ಮೋಸ ಮಾಡಿ, ಆಡಳಿತ ವೆಚ್ಚ ಸರಿದೂಗಿಸಲು ಮುಂದಾಗಿದೆ ಎಂದು ಅವರು ದೂರಿದ್ದಾರೆ.
ಈ ರೀತಿ ಆಡಳಿತ ವೆಚ್ಚ ಎಂದು ಹೇಳಿಕೊಂಡು ಆಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಜೇಬು ತುಂಬಿಸಲು ಹೊರಟಂತಿದೆ. ಈಗ ರಾಜ್ಯದಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬಂದಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಜನರನ್ನು ಮರಳು ಮಾಡಲು ಹಾಲಿನ ಬೆಲೆ ಏರಿಕೆಯ ನಾಟಕವಾಡುತ್ತಿದೆ. ರಾಜ್ಯದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅತ್ಮಹತ್ಯೆಯ ದಾರಿ ಹಿಡಿಯುತ್ತಿರುವುದನ್ನು ತಪ್ಪಿಸಲು ರೈತರ ನೆರವಿಗೆ ಬರಬೇಕಾದ ಸರ್ಕಾರ ರೈತರನ್ನು ಮೋಸ ಮಾಡುತ್ತಿರುವುದು ಸರಿಯಲ್ಲ. ಸರ್ಕಾರಿ ನೌಕರರಿಗೆ 7ನೇ ವೇತನ ಅಯೋಗದ ಶಿಫಾರಸ್ಸುಗಳನ್ನು ಜಾರಿ ಗೊಳಿಸುವ ಸರ್ಕಾರ ಹಾಲಿಗೆ ವೈಜ್ಞಾನಿಕ ಬೆಲೆ ಕೊಡುವುದಾದರೆ ಲೀಟರ್ ಒಂದಕ್ಕೆ 101 ರೂಗಳನ್ನು ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.