ಬೆಂಗಳೂರು: ಕಾವೇರಿ ನದಿಯ ಮಹತ್ವದ ವಿವರಗಳನ್ನು ನೀಡಲು ಅನುಕೂಲವಾಗುವಂತೆ ಮೈಸೂರಿನಲ್ಲಿ ಕಾವೇರಿ ನದಿ ಗ್ಯಾಲರಿ ಆರಂಭಿಸುವುದಾಗಿ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾವೇರಿ ನದಿ ಗ್ಯಾಲರಿ ಆರಂಭಿಸುವ ಸಲುವಾಗಿ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಜತೆ ಒಪ್ಪಂದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದು, ಕಾವೇರಿ ನದಿಯ ಉಗಮದಿಂದ ಹಿಡಿದು ಅದರ ಆರ್ಥಿಕ, ಸಾಂಸ್ಕೃತಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಮೈಸೂರಿನ ದಸರಾ ಮಹೋತ್ಸವ, ವಸ್ತು ಪ್ರದರ್ಶನದ ಆವರಣದಲ್ಲಿ ಕಾವೇರಿ ನದಿ ಗ್ಯಾಲರಿ ಆರು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದರು.
ಈ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ಇರಬೇಕು. ಅದರ ಮಹತ್ವ ಗೊತ್ತಿರಬೇಕು. ಕಾವೇರಿ ನದಿ ಎದುರಿಸುತ್ತಿರುವ ಅಪಾಯಗಳ ಕುರಿತು ತಿಳಿಸಬೇಕು ಎಂದ ಅವರು, ಇಷ್ಟಾದರೂ ರಾಜ್ಯ ಸರ್ಕಾರ ಕಾವೇರಿ ಶುದ್ದೀಕರಣ ಕಾರ್ಯ ಮಾಡುವುದು ಕಷ್ಟ ಎಂದರು.
ಗ್ಯಾಲರಿಯಲ್ಲಿ ಕಾವೇರಿ ನದಿ ಹರಿಯುವ ದಾರಿಯ ವಿವರ, ಅದರ ಮಹತ್ವ,ಕಾವೇರಿ ನದಿ ಪಾತ್ರದಿಂದ ಸೃಷ್ಟಿಯಾದ ಕತೆಗಳು, ಅದರಿಂದ ಆಗಿರುವ ಆರ್ಥಿಕ, ಸಾಂಸ್ಕೃತಿಕ ಲಾಭಗಳು ಹೀಗೆ ಪ್ರತಿಯೊಂದು ವಿಷಯವನ್ನೂ ಅಲ್ಲಿ ಪ್ರದರ್ಶಿಸಲಾಗುವುದು ಎಂದರು.
ಕಾವೇರಿ ನದಿ ಎಲ್ಲಿ ಉಗಮವಾಗುತ್ತದೆ? ಹೇಗೆ ಹರಿಯುತ್ತದೆ? ಎಂಬುದರ ಧ್ವನಿ ಮುದ್ರಣವೂ ಸದರಿ ಗ್ಯಾಲರಿಯಲ್ಲಿ ಸಿಗಲಿದೆ. ಕಸ್ತೂರಿ ರಂಗನ್ ನೇತೃತ್ವದ ಜ್ಞಾನ ಆಯೋಗ ನೀಡಿದ ವರದಿಯ ಹಿನ್ನೆಲೆಯಲ್ಲಿ ಈ ಗ್ಯಾಲರಿಯನ್ನು ಸ್ಥಾಪಿಸಲಾಗುತ್ತಿದ್ದು, ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ವತಿಯಿಂದ ಈ ಗ್ಯಾಲರಿಯನ್ನು ನಿರ್ಮಿಸುವ ಕೆಲಸ ಮೂರುವರೆ ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಮೊದಲ ಮೂರು ವರ್ಷ ಕಾವೇರಿ ನದಿ ಗ್ಯಾಲರಿಯನ್ನು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯೇ ನಿರ್ವಹಿಸಲಿದೆ ಎಂದು ಹೇಳಿದರು.