ಬೆಂಗಳೂರು: ನಗರದ ಕಾವೇರಿ ಜಂಕ್ಷನ್ ಬಳಿ ನಿಗೂಢ ಬ್ಯಾಗ್ ವೊಂದು ಪತ್ತೆಯಾಗಿ ಬಾಂಬ್ ಭೀತಿ ಹುಟ್ಟು ಹಾಕಿ ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಾವೇರಿ ಜಂಕ್ಷನ್ ಬಳಿಯಿರುವ ಹೆಚ್ಡಿಎಫ್ಸಿ ಬ್ಯಾಂಕ್ ಮುಂದೆ ದುಷ್ಕರ್ಮಿಗಳು ಇಟ್ಟಿದ್ದ ಬ್ಯಾಗ್ನಲ್ಲಿ ತೆರೆದು ಬಾಂಬ್ ಇರಬಹುದು ಅಂತಾ ಅನುಮಾನದಿಂದಲೇ ತೆರೆದು ನೋಡಿದ್ರೆ ಅದ್ರಲ್ಲಿ ಸಿಕ್ಕಿದ್ದು ಮಾತ್ರ ಮದ್ಯದ ಬಾಟಲ್ ಹಾಗೂ ಕೆಲ ಆಟಿಕೆ ಸಾಮಾನುಗಳು.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ , ಪತ್ತೆಯಾಗಿದ್ದು ಬಾಂಬ್ ಅಲ್ಲ, ತೆಂಗಿನ ನಾರಿನಲ್ಲಿ ಸುತ್ತಿಟ್ಟಿದ್ದ ಲಿಕ್ವಿಡ್ ರೂಪದ ವಸ್ತು. ಇದರಲ್ಲಿ ಚೀನಾ ಭಾಷೆಯ ಬರಹಗಳಿದ್ದವು. ನಾವು ಬಾಂಬ್ ಎನ್ನುವ ಸಂಶಯದೊಂದಿಗೆ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದೆವು’ ಎಂದು ತಿಳಿಸಿದರು.
ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆ ನಗರದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ತೆರೆದು ನೋಡಿದ್ರೆ ಅದರಲ್ಲಿ ಮದ್ಯದ ಬಾಟಲ್ ಮತ್ತು ಕೆಲ ಆಟಿಕೆಗಳು ಸಿಕ್ಕಿವೆ. ಸುಮಾರು ಒಂದೂವರೆ ಅಡಿಯಷ್ಟು ಎತ್ತರವಿರುವ ಟಿಫನ್ ಬಾಕ್ಸ್ ನಂತಿರವ ಪೆಟ್ಟಿಗೆಗೆ ಹಸಿರು ಬಣ್ಣದ ಟೇಪ್ ಸುತ್ತಿರುವುದು ಕಂಡು ಬಂದಿತು. ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತಲು ಸಂಚಾರವನ್ನು ಕೆಲಕಾಲ ತಡೆಯಲಾಗಿತ್ತು.
ಘಟನೆಯ ಬಳಿಕ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಮತ್ತು ವ್ಯಕ್ತಿಗಳನ್ನು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.