ಬೆಂಗಳೂರು: ರಾಜ್ಯಾದ್ಯಂತ ದ್ವಿಚಕ್ರವಾಹನ ಹಿಂಬದಿ ಸವಾರರಿಗೂ ಈಗಾಗಲೇ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಜ.20ರಿಂದ ಹೆಲ್ಮೆಟ್ ಧರಿಸದಿದ್ದರೆ ಚಾಲಕನಿಗೆ ದಂಡ ತಪ್ಪಿದ್ದಲ್ಲ.
ಕೇಂದ್ರ ಮೋಟಾರು ವಾಹನ ಕಾಯ್ದೆ ಸೆಕ್ಷನ್ 129ರ ಪ್ರಕಾರ ಐಎಸ್ಐ ಮುದ್ರೆಯಿರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವುದು ಕಡ್ಡಾಯವೆಂದು ಹೇಳಿದೆ ಸಾರಿಗೆ ಇಲಾಖೆ. ಇದನ್ನು ಅಚ್ಚುಕಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಪೊಲೀಸ್ ಇಲಾಖೆ. ಅಂದಹಾಗೆ ಈ ಅರ್ಧ ಹೆಲ್ಮೆಟ್ ಮಾದರಿಯನ್ನು ಧರಿಸಬಾರದು ಎಂದು ಹಿಂದೆಯೂ ನಿಯಮವಿತ್ತು. ಆದರೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿರಲಿಲ್ಲ.
ಆದರೆ ಇದೀಗ ಪೊಲೀಸರು ಚುರುಕಾಗಿದ್ದು, ಅರ್ಧ ಹೆಲ್ಮೆಟ್ ಧರಿಸಿ ರಸ್ತೆಗಿಳಿದರೆ ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಇಂಡಿಯನ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್ ಕೂಡ ಸುರಕ್ಷಿತ ಹೆಲ್ಮೆಟ್ಗಾಗಿ ಮಾನದಂಡ ನಿಗದಿ ಮಾಡಿದೆ. ಇದರಿಂದ ಅರ್ಧ ಹೆಲ್ಮೆಟ್ ಮಾದರಿಯನ್ನು ಧರಿಸುವ ಚಾಲಕರು ಹಾಗೂ ಹಿಂಬದಿ ಸವಾರರು ದಂಡ ಕಟ್ಟಬೇಕಾಗುತ್ತದೆ.ನಿಯಮ ಉಲ್ಲಂಘಿಸುವ ಹಿಂಬದಿ ಸವಾರರಿಗೂ ಜ.20ರಿಂದ ದಂಡ ವಿಧಿಸಲಾಗುವುದು. ದಂಡವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ. ಸಲೀಂ ತಿಳಿಸಿದ್ದಾರೆ.