ಬೆಂಗಳೂರು: ಅಂತಾರಾಷ್ಟ್ರೀಯ 8ನೇ ಚಲನಚಿತ್ರೋತ್ಸವ ಆರಂಭಗೊಂಡಿದೆ. ಸಿನಿಲೋಕದ ತಾರೆಗಳು ನೆರೆದಿದ್ದ ಸುಂದರ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯೆ ಹಾಗೂ ಖ್ಯಾತ ಬಾಲಿವುಡ್ ನಟಿ ಜಯಾ ಬಚ್ಚನ್ ಚಾಲನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಅಂಬರೀಶ್, ಹಾಲಿವುಡ್ ಚಲನಚಿತ್ರ ನಿರ್ಮಾಪಕ ಡಾ. ಅಶೋಕ್ ಅಮೃತ್ರಾಜ್, ಕನ್ನಡದ ನಟ ಡಾ. ಶಿವರಾಜ್ ಕುಮಾರ್, ಸುದೀಪ್, ತೆಲುಗು ಚಲನಚಿತ್ರ ಕಲಾವಿದ ಡಿ. ವೆಂಕಟೇಶ್ ಸೇರಿದಂತೆ ಹಲವು ಹಿರಿಯ ಕಿರಿಯ ತಾರೆಯರು ಭಾಗವಹಿಸಿದ್ದರು.
ಚಲನಚಿತ್ರೋತ್ಸವ ಸ್ಮರಣ ಸಂಚಿಕೆಯನ್ನು ಹಿರಿಯ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅನಾವರಣಗೊಳಿಸಿದರು. ದೇಶ ವಿದೇಶಗಳ 50ಕ್ಕೂ ಹೆಚ್ಚು ಚಿತ್ರರಂಗದ ಪ್ರತಿನಿಧಿಗಳು, ನಿರ್ದೇಶಕರು, ತಂತ್ರಜ್ಞರು ಭಾಗವಹಿಸಿದ್ದಾರೆ.
ಜಯಾ ಬಚ್ಚನ್ ಮಾತನಾಡಿ ಚಿತ್ರನಗರಿ ನಿರ್ಮಿಸಲು ಮೈಸೂರಿನಲ್ಲಿ ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿ ನೀಡಿರುವುದು ಅತ್ಯಂತ ಉತ್ತಮ ಮತ್ತು ಸ್ತ್ಯುತ್ಯಾರ್ಹ ಬೆಳವಣಿಗೆ. ಸರ್ಕಾರ ಕಲೆ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ, ಸಹಕಾರವನ್ನು ಇನ್ನಷ್ಟು ನೀಡಬೇಕು ಎಂದರು.
ಫೆಬ್ರವರಿ 5ರ ವರೆಗೆ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಈ ಬಾರಿ ಮೈಸೂರನ್ನು ಸೇರಿಸಲಾಗಿದ್ದು, ಮೈಸೂರಲ್ಲಿ ಹಲವು ಸಿನಿಮಾಗಳು ಪ್ರದರ್ಶನವಾಗಲಿವೆ. ಒಟ್ಟಾರೆ ಬೆಂಗಳೂರಿನಲ್ಲಿ ನಡೆಯುತ್ತಿರುವ 8ನೇ ಚಲನಚಿತ್ರೋತ್ಸವ ಕಳೆಕಟ್ಟಿರುವುದಂತು ಸತ್ಯ.