ಬೆಂಗಳೂರು: ಜಿಲ್ಲಾ ಮತ್ತು ತಾಪಂ ಚುನಾವಣೆ ಕಾವೇರುತ್ತಿದ್ದಂತೆಯೇ ಈ ಚುನಾವಣೆಗಳ ಫಲಿತಾಂಶ ನಮ್ಮ ಸರ್ಕಾರಕ್ಕೆ ಜನಾದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಚುನಾವಣೆಯಲ್ಲಿ ಬರುವ ಫಲಿತಾಂಶದಿಂದ ನನ್ನ ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ನಮ್ಮದೇ. ನಾವು ಭರ್ಜರಿ ಜಯಗಳಿಸುತ್ತೇವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 32 ತಿಂಗಳ ಆಡಳಿತದಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಹಿಂದೆ ಯಾವ ಸರ್ಕಾರ ನೀಡದ ಸೌಲಭ್ಯಗಳನ್ನು ನೀಡಿದ್ದೇವೆ ಎಂದರು.
ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ವರ್ಗಾವಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸ್ಥಳೀಯ ಮಟ್ಟದ ಡಿಐಜಿಗಳು, ಕೆಳಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಇಲ್ಲವೆ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳ ನಿಯುಕ್ತಿ ಮಾಡುವ ಅಧಿಕಾರ ಹೊಂದಿರುತ್ತಾರೆ.
ಅವರು ಏನು ಮಾಡುತ್ತಾರೆ ಎಂದು ನಾವು ದಿನಾ ನೋಡಲು ಸಾಧ್ಯವಿಲ್ಲ. ಶೆಣೈ ಅವರ ವರ್ಗಾವಣೆಯು ಅದೇ ರೀತಿಯಾಗಿದೆ. ಇದರಿಂದ ಸರ್ಕಾರಕ್ಕೆ ಮುಜುಗರವಾಗಲಿ ಅಥವಾ ಹಿನ್ನೆಡೆಯಿಲ್ಲ ಎಂದು ಸಮರ್ಥಿಸಿಕೊಂಡರು.