ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯಲ್ಲಿ ಸಂಭವಿಸಿದ ರುದ್ರಭಯಂಕರ ಹಿಮಪಾತದಲ್ಲಿ ಅಸುನೀಗಿದ 10 ಯೋಧರಲ್ಲಿ ಮೂವರು ಕನ್ನಡಿಗರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಯಾಚಿನ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟ 10 ಯೋಧರ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಗೊಳಿಸಿದ್ದು, ಅದರಲ್ಲಿ ಕರ್ನಾಟಕದ ಮೂವರು ಯೋಧರು, ತಮಿಳುನಾಡಿದ ನಾಲ್ವರು ಹಾಗೂ ಕೇರಳ-1, ಮಹಾರಾಷ್ಟ್ರ-1, ಆಂಧ್ರಪ್ರದೇಶದಕ್ಕೆ ಸೇರಿದ ಓರ್ವ ಯೋಧ ಮೃತಪಟ್ಟಿದ್ದಾರೆ. ಕರ್ನಾಟಕದ ಕುಂದಗೋಳ ತಾಲ್ಲೂಕು ಬೆಟದೂರಿನ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ(35), ಎಚ್ ಡಿ ಕೋಟೆ ಹಂಪಾಪುರದ ಯೋಧ ಮಹೇಶ(30) ಹಾಗೂ ಹಾಸನ ಜಿಲ್ಲೆ ತೇಜೂರಿನ ಸುಬೇದಾರ್ ಟಿಟಿ ನಾಗೇಶ್(41) ಮೃತಪಟ್ಟಿರುವ ಯೋಧರು.
9 ಮಂದಿ ಯೋಧರು ಮತ್ತು ಅಧಿಕಾರಿ ದರ್ಜೆಯ ಸೈನಿಕರೊಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾಗಿ ಭೂಸೇನೆ ಘೋಷಿಸಿದೆ. ಇವರೆಲ್ಲರೂ ಮದ್ರಾಸ್ ರೆಜಿಮೆಂಟ್ಗೆ ಸೇರಿದವರಾಗಿದ್ದು, ಪಾಕಿಸ್ಥಾನ ಗಡಿಯ ನಿಯಂತ್ರಣರೇಖೆ ಸನಿಹದ ಸೇನಾ ಪೋಸ್ಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಸೈನಿಕ ಪೋಸ್ಟ್ ಸಮುದ್ರ ಮಟ್ಟಕ್ಕಿಂತ 19,600 ಅಡಿ ಎತ್ತರದಲ್ಲಿದೆ. ಭಾರೀ ಹಿಮ ಪಾತವಾಗಿ ಸೈನಿಕರು ನಾಪತ್ತೆಯಾದ ಬಳಿಕ ಅವರ ಪತ್ತೆಗೆ ಸೇನೆಯ ವಿಶೇಷ ತಂಡಗಳು ಅತ್ಯಾಧುನಿಕ ಪತ್ತೆ ಸಲಕರಣೆಗಳೊಂದಿಗೆ ಲೇಹ್ನಿಂದ ತೆರಳಿದ್ದು, ಅವಿರತ ಶ್ರಮ ಪಡುತ್ತಿವೆ. ಸೇನಾಪಡೆ ಶ್ವಾನದಳವನ್ನು ಬಳಸಿತಾದರೂ ಅದು ಶುಕ್ರವಾರ ಸಂಜೆ ಯವರೆಗೂ ಫಲಿತಾಂಶ ನೀಡಿರಲಿಲ್ಲ.
ಹನುಮಂತಪ್ಪ ಕೊಪ್ಪ ಕಳೆದ 14 ವರ್ಷಗಳಿಂದ ಭಾರತೀಯ ಸೇನಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿತ್ತು. ಎಚ್ ಡಿ ಕೋಟೆ ಮಹೇಶ್ ಎಂಟು ವರ್ಷಗಳಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವಾರಗಳ ಹಿಂದೆಯಷ್ಟೇ ಸಿಯಾಚಿನ್ ತೆರಳುತ್ತಿರುವುದಾಗಿ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ಕಳೆದ 20 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಟಿಟಿ ನಾಗೇಶ್ ನಿವೃತ್ತಿ ಹೊಂದುವ ಹಂತದಲ್ಲಿದ್ದರು. ಇವರ ಪತ್ನಿ ಆಶಾ ಹಾಗೂ ಇಬ್ಬರು ಮಕ್ಕಳು ಹಾಸನ ನಗರಕ್ಕೆ ಹೊಂದಿಕೊಂಡ ಪುಟ್ಟಹಳ್ಳಿ ತೇಜೂರಿನಲ್ಲಿ ವಾಸವಾಗಿದ್ದಾರೆ.