ಬೆಂಗಳೂರು: ಕುಮಾರ ಸ್ವಾಮಿ ಪುತ್ರನ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರಿದೆ. ಅದ್ದೂರಿ ಸಿನಿಮಾ ತೆಗೆಯಲು ಅವರಿಗೆ ಎಲ್ಲಿಂದ ಹಣ ಬಂತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮೇಲೆ ದುಬಾರಿ ವಾಚ್ ಮತ್ತು ಕನ್ನಡಕ ಧರಿಸುತ್ತಿರುವ ಬಗ್ಗೆ ಮಾಡಿರುವ ಆರೋಪಕ್ಕೆ ಪ್ರತಿಕ್ರ್ರಿಯಿಸಿರುವ ಅವರು, ಕುಮಾರ ಸ್ವಾಮಿ ಪುತ್ರನಿಗಾಗಿ ದುಬಾರಿ ವೆಚ್ಚದ ಸಿನಿಮಾ ನಿರ್ಮಿಸಲಾಗುತ್ತಿದೆ. ಅವರ ಪುತ್ರ ಕೋಟ್ಯಂತರ ರೂಪಾಯಿ ಎಲ್ಲಿ ದುಡಿದಿದ್ದರು. ಗಾಜಿನ ಮನೆಯಲ್ಲಿ ಕುಳಿತು ಮಾತಾಡೋದು ಸರಿಯಲ್ಲ ಎಂದರು.
ತಮ್ಮ ಬಳಿ ಇರುವ ದುಬಾರಿ ಬೆಲೆಯ ವಾಚ್ ಮತ್ತು ಕನ್ನಡಕವನ್ನು ಐದು ಲಕ್ಷ ರೂಪಾಯಿಗೆ ಕೊಡಲು ಸಿದ್ಧವಿರುವುದಾಗಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ವಾಚ್ ತಾವು ಖರೀದಿಸಿದ್ದಲ್ಲ. ಇದನ್ನು ತಮಗೆ ಯಾರೋ ಉಡುಗೊರೆ ನೀಡಿದ್ದಾರೆ ಎಂದರು.
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದ ಯೋಧ ಹನುಮಂತಪ್ಪ ಅವರ ಮನೆಯವರು ದೆಹಲಿಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯಲ್ಲಿ ಯೋಧನ ಮನೆಗೆ ಭೇಟಿ ನೀಡಲು ತಮಗೆ ಸಾಧ್ಯವಾಗಲಿಲ್ಲ. ಆದರೆ, ಕರ್ನಾಟಕ ಭವನದಲ್ಲಿ ಯೋಧನ ಕುಟುಂಬದವರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಕರ್ನಾಟಕ ಭವನದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. 20 ಜಿಲ್ಲಾ ಪಂಚಾಯ್ತಿ ಹಾಗೂ 100ಕ್ಕೂ ಹೆಚ್ಚು ತಾಲ್ಲೂಕು ಪಂಚಾಯತ್ ಗಳಲ್ಲಿ ಅಧಿಕಾರ ಹಿಡಿಯುವ ಮಟ್ಟಿನ ಗೆಲುವು ಸಾಧಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.