ಬೆಂಗಳೂರು: ಒಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ಅವರು ದುಬಾರಿ ವಾಚ್ ಮುಂದಿಟ್ಟುಕೊಂಡು ಕಾಲೆಳೆಯುತ್ತಿದ್ದರೂ ಮತ್ತೊಂದು ಕಡೆ ಅತಂತ್ರಗೊಂಡಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ.
ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಹಿಡಿಯಲು ಬಿಡಬಾರದು ಎಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹಸಿರು ನಿಶಾನೆ ತೋರಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.
ಜಾತ್ಯಾತೀತ ಜನತಾದಳದೊಂಗೆ ಹೊಂದಾಣಿಕೆ ಮಾಡಿಕೊಂಡರೆ, ಹೆಚ್ಚುವರಿಯಾಗಿ ಎಂಟು ಜಿಲ್ಲಾ ಪಂಚಾಯಿತ್ ಹಾಗೂ 30 ರಿಂದ 40 ತಾಲೂಕು ಪಂಚಾಯಿತಿಗಳು ಕಾಂಗ್ರೆಸ್ ವ್ಯಾಪ್ತಿಗೆ ಬರುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರವಾಗಿದೆ.
ಸ್ಥಳೀಯವಾಗಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಮ್ಮ ವಿರೋಧವಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದ್ದು, ಆಯಾ ಜಿಲ್ಲಾ ತಾಲೂಕು ಶಾಸಕರು ಈ ಬಗ್ಗೆ ಜವಾಬ್ದಾರಿ ವಹಿಸಲು ಸಲಹೆ ನೀಡಲಾಗಿದೆ ಎನ್ನಲಾಗಿದೆ.
ಒಂದೆಡೆ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಸೇರಿ ಅಧಿಕಾರ ಪಡೆಯಲು ಹವಣಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಜೆಡಿಎಸ್ ನಾಯಕರ ಮನೆ ಬಾಗಿಲು ತಟ್ಟಿ ಬಂದಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಗೆ ಕಾಂಗ್ರೆಸ್ ಗಿಂತ ಬಿಜೆಪಿಯತ್ತ ಹೆಚ್ಚಿನ ಒಲವಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮುಖ್ಯಪಾತ್ರ ಜೆಡಿಎಸ್ನದ್ದಾಗಿದ್ದು ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.