ಬೆಂಗಳೂರು: ರಾಜ್ಯದಲ್ಲಿ 15 ರಿಂದ 20 ಲಕ್ಷ ಕೋಟಿ ರೂ ಮೌಲ್ಯದ ವಕ್ಪ್ ಭೂಮಿಯನ್ನು ಕಾಂಗ್ರೆಸ್ನ ಹಲವು ನಾಯಕರು ಕಬಳಿಸಿರುವ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಈ ಕುರಿತ ಮಾಣಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಲು ಸರ್ಕಾರಕ್ಕೆ ಸೂಚಿಸುವಂತೆ ಬಿಜೆಪಿ ನಿಯೋಗ ರಾಜ್ಯಪಾಲ ವಾಜುಬಾಯಿ ರೂಢಬಾಯಿ ವಾಲಾರನ್ನು ಒತ್ತಾಯಿಸಿದೆ.
ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಬೇಕೆಂದು ಕೋರಿದೆ.
ಈ ಹಗರಣದಲ್ಲಿ ವಕ್ಪ್ ಸಚಿವ ಖಮರುಲ್ ಇಸ್ಲಾಂ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಕೇಂದ್ರದ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ, ಸಿ.ಕೆ.ಜಾಫರ್ ಷರೀಫ್, ಶಾಸಕರಾದ ಎನ್.ಎ.ಹ್ಯಾರಿಶ್, ತನ್ವೀರ್ ಶೇಠ್ ಹಾಗೂ ಇಕ್ಬಾಲ್ ಅನ್ಸಾರಿ ಹಾಗೂ ಮಾಜಿ ಸಚಿವ ದಿವಂತಗ ಅಜೀಜ್ ಶೇಠ್ ಅವರು ಆಸ್ತಿ ಕಬಳಿಸಿರವವರಲ್ಲಿ ಸೇರಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ವಕ್ಪ್ ಮಂಡಳಿಗೆ ಸೇರಿದ 57 ಸಾವಿರ ಎಕರೆ ಜಮೀನು ಪರಭಾರೆ ಮತ್ತು ಅಕ್ರಮವಾಗಿ ವಿವಿಧ ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳು ಕಬಳಿಸಲು ಯತ್ನಿಸಿವೆ. ಇವುಗಳ ಮಾರ್ಗಸೂಚಿ ದರ ನಾಲ್ಕು ಲಕ್ಷ ಕೋಟಿ ರೂ ಆಗಿದ್ದು, ಮಾರುಕಟ್ಟೆ ದರ 15 ರಿಂದ 20 ಲಕ್ಷ ಕೋಟಿ ರೂ ಆಗಲಿದೆ ಎಂದರು.
ಬರುವ ಬಜೆಟ್ ಅಧಿವೇಶನದಲ್ಲಿ ವರದಿ ಮಂಡಿಸುವವರಗೆ ಸದನದ ಒಳಗೂ-ಹೊರಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ. ಮುಸ್ಲಿಂ ಸಮುದಾಯದ ಆಸ್ತಿ ಸಂರಕ್ಷಣೆಯೇ ನಮ್ಮ ಮೂಲ ಉದ್ದೇಶವಾಗಿದೆ.ರಾಜ್ಯಪಾಲ ವಾಜೂಭಾಯಿ ವಾಲಾ, ಈ ವರದಿಯ ಕುರಿತಂತೆ ಕಾನೂನು ತಜ್ಞರ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.