News Kannada
Friday, October 07 2022

ಬೆಂಗಳೂರು ನಗರ

“ಏನೀ ಮಹದಾಯಿ ವಿವಾದ…?” - 1 min read

Photo Credit :

ಬೆಂಗಳೂರು: ಎರಡು ದಶಕಗಳಿಂದ ನಡೆಸುತ್ತಿದ್ದ ಮಹದಾಯಿ ಹೋರಾಟಕ್ಕೆ ಕಡೆಗೂ ನ್ಯಾಯ ಸಿಕ್ಕಿಲ್ಲ. ಉತ್ತರ ಕರ್ನಾಟಕ ಭಾಗದ ಜನರಿಗೆ ಮಹದಾಯಿ ಜೀವನದಿಯಾಗಬಹುದೆಂದು ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕ ಸಲ್ಲಿಸಿದ್ದ ಮದ್ಯಂತರ ಅರ್ಜಿಯನ್ನು ನ್ಯಾಯಾಧೀಕರಣ ವಜಾಗೊಳಿಸಿದೆ.

ಮಹದಾಯಿ ನದಿಯನ್ನು ಮಲ್ಲಪ್ರಭ ನದಿಗೆ ಸಂಪರ್ಕಿಸುವ ಮೂಲಕ ಬೆಳಗಾವಿ, ಹುಬ್ಬಳ್ಳಿ, ಗದಗ ಮೊದಲಾದ ಉತ್ತರ ಕರ್ನಾಟಕ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಆಶಯದೊಂದಿದೆ ಕರ್ನಾಟಕ ಪ್ರಯತ್ನಿಸುತ್ತಿತ್ತು.  ಆದರೆ, ಗೋವಾ ಸರಕಾರ ಇದಕ್ಕೆ ಕ್ಯಾತೆ ತೆಗೆದು ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಇತ್ತು.

ಮಹದಾಯಿ ನದಿ ಕುರಿತು…
ಕಾವೇರಿ ನದಿ ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಹೆಚ್ಚು ಹರಿದು ಸಮುದ್ರ ಸೇರುವಂತೆ, ಮಹದಾಯಿ ನದಿ ನಮ್ಮ ರಾಜ್ಯದಲ್ಲಿ ಹುಟ್ಟಿ ಗೋವಾದಲ್ಲಿ ಹೆಚ್ಚು ಹರಿದು ಅರಬ್ಬೀ ಸಮುದ್ರ ಸೇರಿಕೊಳ್ಳುತ್ತದೆ. ಗೋವಾದಲ್ಲಿ ಮಾಂಡವಿ ಎಂದು ಖ್ಯಾತವಾಗಿರುವ ಮಹದಾಯಿ ನದಿ ಬೆಳಗಾವಿಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಭೀಮ್’ಗಢ್ ಎಂಬಲ್ಲಿ ಹುಟ್ಟುತ್ತದೆ. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ ದಾಟಿ ಗೋವಾ ರಾಜ್ಯವನ್ನು ತಲುಪುತ್ತದೆ. ಕರ್ನಾಟಕದಲ್ಲಿ ಈ ನದಿ 30 ಕಿಮೀ ಪ್ರವಹಿಸುತ್ತದೆ. ಗೋವಾದಲ್ಲಿ 52 ಕಿಮೀ ಪ್ರವಹಿಸಿ ಅಲ್ಲಿಂದ ಅರಬ್ಬೀ ಸಮುದ್ರ ಸೇರುತ್ತದೆ.

ಮಹದಾಯಿ ನದಿಗೆ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದ ಭಾಗದಿಂದಲೇ. ಕಳಸಾ, ಬಂಡೂರಿ ಸೇರಿದಂತೆ ಹಲವು ತೊರೆ ಅಥವಾ ಉಪನದಿಗಳಿಂದ ನೀರು ಮಹದಾಯಿ ನದಿ ಸೇರಿಕೊಳ್ಳುತ್ತದೆ. ಒಟ್ಟು 200 ಟಿಎಂಸಿ ಅಡಿಯಷ್ಟು ನೀರು ಈ ನದಿಯಲ್ಲಿ ಸಂಗ್ರಹವಾಗುತ್ತದೆ. ಆದರೆ, ಬಹುತೇಕ ನೀರು ಸಮುದ್ರ ಸೇರುತ್ತದೆ.

ಕಳಸಾ ಬಂಡೂರಿ ಏನೀ ಯೋಜನೆ ?
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರದ ಸ್ಥಿತಿ ಇದೆ. 1980ರಲ್ಲಿ ನವಲಗುಂದ ಮತ್ತು ನರಗುಂದದ ರೈತರು ನೀರಿನ ಅಭಾವಕ್ಕೆ ಬೇಸತ್ತು ದೊಡ್ಡ ಪ್ರತಿಭಟನೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಲು ರಚಿಸಿದ್ದ “ಬೊಮ್ಮಾಯಿ ಸಮಿತಿ”, ಮಹದಾಯಿ ಮತ್ತು ಮಲ್ಲಪ್ರಭ ನದಿ ಜೋಡಣೆಗೆ ಶಿಫಾರಸು ಮಾಡಿತು. ಅದರಂತೆ ಮಹದಾಯಿ ನದಿಯನ್ನ ಸೇರಿಕೊಳ್ಳುವ ಕಳಸಾ, ಬಂಡೂರಿ, ಹಳತಾರ್, ಚೋರ್ಲಾ, ಪೋಟ್ಲಾ, ಕೋರ್ಲಾ ಮತ್ತು ಗುರ್ಕೆ ತೊರೆಗಳಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಕೆಲ ಭಾಗದ ನೀರನ್ನು ಮಲ್ಲಪ್ರಭಕ್ಕೆ ಹರಿಸುವುದು ಈ ಯೋಜನೆಯ ಉದ್ದೇಶ.

ಬೊಮ್ಮಾಯಿ ಅವಧಿಯಲ್ಲಿ ಕಾರ್ಯರೂಪಕ್ಕೆ ಯತ್ನ:
ಎಸ್.ಆರ್.ಬೊಮ್ಮಾಯಿ 1989ರಲ್ಲಿ ಮುಖ್ಯಮಂತ್ರಿಯಾದಾಗ ಈ ಸಮಿತಿಯ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ಸರಕಾರ ಮುಂದಾಯಿತು. ಕಳಸಾ ಉಪನದಿಗೆ ಅಣೆಕಟ್ಟು ಕಟ್ಟಿ ಆ ಮೂಲಕ ಕರ್ನಾಟಕಕ್ಕೆ 45 ಟಿಎಂಸಿ ಅಡಿಗಳಷ್ಟು ನೀರನ್ನು ಕರ್ನಾಟಕದ ಭಾಗಗಳಿಗೆ ಹರಿಸುವ ಉದ್ದೇಶವಿತ್ತು. ಜೊತೆಗೆ ಕಳಸಾ ಬಳಿ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿ ಕರ್ನಾಟಕ ಮತ್ತು ಗೋವಾ ಎರಡೂ ವಿದ್ಯುತ್ ಹಂಚಿಕೊಳ್ಳುವುದು ಯೋಜನೆಯ ಒಂದು ಭಾಗವಾಯಿತು.

See also  ಬಾಲಕನ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಮದರಸಾದ ಶಿಕ್ಷಕನ ಬಂಧನ

ಆದರೆ, ಬೊಮ್ಮಾಯಿ ಸರಕಾರ ಪತನಗೊಂಡ ಬಳಿಕ ಯೋಜನೆ ಮುರುಟಿಕೊಂಡು ಬಿದ್ದಿತು. ಆರಂಭದಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದ ಗೋವಾ ಸರಕಾರ ಈಗ ವಿರೋಧಿಸಲು ಆರಂಭಿಸಿತು. ಆದರೆ, ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ಇನ್ಸ್’ಟಿಟ್ಯೂಟ್ (ಎನ್’ಇಇಐ) ಸಂಸ್ಥೆಯು ಈ ಯೋಜನೆಗೆ ಹಸಿರು ನಿಶಾನೆ ತೋರಿದ ಬಳಿಕ ಕರ್ನಾಟಕ ಸರಕಾರ ಮತ್ತೆ ಯೋಜನೆಗೆ ಜೀವ ತುಂಬತೊಡಗಿತು.

ಕೃಷ್ಣ ಅವಧಿಯಲ್ಲೂ ಯತ್ನ:
ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, ಆಗಿನ ನೀರಾವರಿ ಸಚಿವ ಹೆಚ್.ಕೆ.ಪಾಟೀಲ್ ಈ ಯೋಜನೆಗೆ ಕಳಸಾ-ಬಂಡೂರಿ ನಾಲೆ ಯೋಜನೆ ಎಂದು ಹೆಸರು ಬದಲಿಸಿದರು. ಅದರಂತೆ, ಮಹದಾಯಿ ನದಿಯಿಂದ 9 ಟಿಎಂಸಿ ಅಡಿ ನೀರನ್ನು ಮಲ್ಲಪ್ರಭ ನದಿಗೆ ಹರಿಯಿಸುವ ಉದ್ದೇಶವಿತ್ತು. ಈ ಯೋಜನೆಗೆ ಕೇಂದ್ರದ ವಾಜಪೇಯಿ ಸರಕಾರ ಹಾಗೂ ಕೇಂದ್ರೀಯ ಜಲ ಆಯೋಗ ಒಪ್ಪಿಗೆ ನೀಡಿತಾದರೂ ಗೋವಾ ಸರಕಾರದಿಂದ ಆಕ್ಷೇಪ ವ್ಯಕ್ತವಾದ ಬಳಿಕ ಕೈಚೆಲ್ಲಿ ಸುಮ್ಮನಾಯಿತು. ಹೀಗಾಗಿ, ಕಳಸಾ ಬಂಡೂರಿ ನಾಲೆ ಯೋಜನೆ ಹಾಗೆಯೇ ಸ್ಥಗಿತಗೊಂಡಿತು. ಈಗಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರೇ ಆಗಿನ ಗೋವಾ ಮುಖ್ಯಮಂತ್ರಿಯಾಗಿದ್ದವರು. ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬರದೇ ಇರಲು ಅವರೇ ಪ್ರಮುಖ ಕಾರಣವೆಂದರೆ ತಪ್ಪಾಗುವುದಿಲ್ಲ.

ಕುಮಾರಸ್ವಾಮಿಯಿಂದ ಯೋಜನೆಗೆ ಪುನಶ್ಚೇತನ:
2006ರಲ್ಲಿ ಆಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಯೋಜನೆಗೆ ಮತ್ತೆ ಜೀವ ತುಂಬಿದರು. ಆ ವರ್ಷದ ಸೆಪ್ಟಂಬರ್ 22ರಂದು ಬೆಳಗಾವಿನ ಖಾನಾಪುರದ ಕನಕುಂಬಿಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಗೋವಾ ಸರಕಾರ ಕೋರ್ಟ್ ಗೆ ಮನವಿ ಮಾಡಿ ಕಾಮಗಾರಿಗೆ ತಡೆ ತಂದಿತು.

ಗೋವಾದ ಕ್ಯಾತೆ ಏನು..?
ಮಹದಾಯಿ ನದಿ ಗೋವಾದ ಪ್ರಮುಖ ಎರಡು ನದಿಗಳಲ್ಲೊಂದು. ಮಹದಾಯಿಯ ನೀರಿನ ಸಂಗ್ರಹಕ್ಕೆ ಕಾರಣವಾಗುವ ತೊರೆಗಳಿಗೆ ತಡೆ ಹಾಕಿದರೆ ಗೋವಾ ಪಾಲಿಗೆ ಸಿಗುವ ನೀರು ಕಡಿಮೆಯಾಗುತ್ತದೆ. ಮಹದಾಯಿ ನದಿ ನೀರಿನ ಹರಿವು ಕಡಿಮೆಯಾದರೆ ಗೋವಾದ ಸುಂದರ ಮತ್ತು ಆರೋಗ್ಯಯುತ ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಧಕ್ಕೆ ಬೀಳುತ್ತದೆ ಎಂಬುದು ಗೋವಾದ ಆತಂಕವಾಗಿದೆ. ಹೀಗಾಗಿ, ಕಳಸಾ ಬಂಡೂರಿ ಯೋಜನೆಯನ್ನು ಗಟ್ಟಿಯಾಗಿ ವಿರೋಧಿಸುತ್ತಾ ಬಂದಿದೆ.

ಮಹದಾಯಿ ನದಿಯ ಉಪನದಿಗಳ ಪೈಕಿ ಕಳಸಾ, ಬಂಡೂರಿ ಸೇರಿದಂತೆ 7 ತೊರೆಗಳಿಗೆ ಅಣೆಕಟ್ಟು ಕಟ್ಟಿ ಆ ಮೂಲಕ ನೀರನ್ನು ಮಲ್ಲಪ್ರಭದತ್ತ ತಿರುಗಿಸುವುದು ಮಹದಾಯಿ ಯೋಜನೆಯ ಮೂಲ ಉದ್ದೇಶ. ಸದ್ಯಕ್ಕೆ ಕಳಸಾ ಮತ್ತು ಬಂಡೂರಿ ನಾಲೆ ಯೋಜನೆಗಳನ್ನಷ್ಟೇ ಕರ್ನಾಟಕ ಸರಕಾರ ಕೈಗೆತ್ತುಕೊಂಡು ಬಹುತೇಕ ಪೂರ್ಣಗೊಳಿಸಿದೆ. ಒಂದು ವೇಳೆ, ಮಹದಾಯಿ ನದಿಯಿಂದ ನೀರನ್ನು ಮಲ್ಲಪ್ರಭದತ್ತ ತಿರುಗಿಸಿದರೆ ನೀರು ಕಡಿಮೆಯಾಗಿ ಗೋವಾದ ಪರಿಸರ ಸಮತೋಲನದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದು ಗೋವಾದವರ ವಾದ.

ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಕಳಸಾ ಬಂಡೂರಿ ಯೋಜನೆಗಳಿಗೆ ಗೋವಾ ಸರಕಾರ ಒಪ್ಪಿಗೆ ಸೂಚಿಸಿತ್ತು. ಆದರೆ, ಅದಾದ ಬಳಿಕ ಗೋವಾದಲ್ಲಿ ಪರಿಸರವಾದಿಗಳ ಹೋರಾಟದಿಂದಾಗಿ ಅಲ್ಲಿ ಯೋಜನೆಗೆ ತೀವ್ರ ವಿರೋಧ ಹುಟ್ಟಿಕೊಂಡಿದೆ.

See also  ಡ್ರಗ್ಸ್ ಪ್ರಕರಣ: ಹೈದರಾಬಾದ್ ಮೂಲದ ಉದ್ಯಮಿ ಹಾಗೂ ನಟರಿಗೆ ನೋಟಿಸ್ ಜಾರಿ

ಟಿಂಬರ್ ಮಾಫಿಯಾ..?
ಮಹದಾಯಿ ನದಿ ಪಾತ್ರದಲ್ಲಿರುವ ಅಮೂಲ್ಯ ಅರಣ್ಯದ ಮರಗಳ ಮೇಲೆ ಕರ್ನಾಟಕದ ಮರ ಮಾಫಿಯಾದ ಕಣ್ಣು ಬಿದ್ದಿದೆ ಎಂದು ಗೋವಾರ ಪರಿಸರವಾದಿಗಳು ಆಪಾದಿಸುತ್ತಿದ್ದಾರೆ. ಅಣೆಕಟ್ಟು ನಿರ್ಮಾಣದ ಬಳಿಕ ಮುಳುಗಡೆಯಾಗುವ ಅರಣ್ಯಪ್ರದೇಶವನ್ನು ಲೂಟಿ ಮಾಡುವುದು ಟಿಂಬರ್ ಮಾಫಿಯಾದ ದುರುದ್ದೇಶವಾಗಿದೆ ಎಂದು ಮಹದಾಯ್ ಬಚಾವೋ ಆಂದೋಲನ್ ಎಂಬ ಎನ್’ಜಿಓ ಸಂಸ್ಥೆಯ ಸಂಚಾಲಕ ರಾಜೇಂದ್ರ ಕೇರ್ಕರ್ ಹೇಳುತ್ತಾರೆ.

ಪರಿಸರವಾದಿಗಳು, ಪರಿಸರತಜ್ಞರ ಹೋರಾಟದ ಹಿನ್ನೆಲೆಯಲ್ಲಿ ಗೋವಾದಲ್ಲಿ ಈಗ ಪಕ್ಷಾತೀತವಾಗಿ ಕಳಸಾ ಬಂಡೂರಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಮನೋಹರ್ ಪಾರಿಕ್ಕರ್ ಗೋವಾ ಸಿಎಂ ಆದ ಅವಧಿಯಲ್ಲಿ ಅಲ್ಲಿನ ಸರಕಾರ ಖಂಡತುಂಡವಾಗಿ ಯೋಜನೆಗೆ ಅಡ್ಡಗಾಲು ಹಾಕಿತು. ಕರ್ನಾಟಕ ಸರಕಾರದ ವಿರೋಧದ ನಡುವೆಯೂ ಮಹದಾಯಿ ನದಿ ವಿವಾದ ಸಂಬಂಧ ಕೇಂದ್ರೀಯ ನ್ಯಾಯಾಧೀಕರಣ ಸ್ಥಾಪನೆಗೆ ಕೇಂದ್ರ ಸರಕಾರದ ಮನವೊಲಿಸಿತು.

ನ್ಯಾಯಾಧೀಕರಣ ಸ್ಥಾಪನೆ:
2009ರಲ್ಲಿ ಮಹದಾಯಿ ನೀರು ವಿವಾದ ನ್ಯಾಯಾಧಿಕರಣವನ್ನು ಸ್ಥಾಪಿಸಲಾಯಿತು. ಕಳಸಾ ಬಂಡೂರಿ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಗೋವಾ ಮಾಡಿಕೊಂಡಿದ್ದ ತಡೆ ಮನವಿಯನ್ನು ನ್ಯಾಯಾಧಿಕರಣವು ತಿರಸ್ಕರಿಸಿತ್ತು. ಆದರೆ, ಕಳೆದ ವರ್ಷ ಗೋವಾದ ಮೇಲ್ಮನವಿಯನ್ನು ಪರಿಶೀಲಿಸಿದ ನ್ಯಾಯಾಧೀಕರಣವು ಕಳಸಾ ಕಾಮಗಾರಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡಿತು. ಇದೀಗ 7.5 ಟಿಎಂಸಿ ನೀರು ಬೇಕೆಂದು ಕರ್ನಾಟಕ ಸಲ್ಲಿಸಿದ್ದ ಮದ್ಯಂತರ ಅರ್ಜಿಯನ್ನು ನ್ಯಾಯಾಧಿಕರಣ ವಜಾಗೊಳಿಸಿರುವುದು ಕರ್ನಾಟಕದ ಪಾಲಿಗೆ ಹಿನ್ನೆಡೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು