News Kannada
Thursday, October 06 2022

ಬೆಂಗಳೂರು ನಗರ

ಮುಂದುವರೆದ ಕಾವೇರಿ ಕಿಚ್ಚು: ಹಲವರ ಬೆಂಬಲ - 1 min read

Photo Credit :

ಮುಂದುವರೆದ ಕಾವೇರಿ ಕಿಚ್ಚು: ಹಲವರ ಬೆಂಬಲ

ಮಂಡ್ಯ: ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಗುರುವಾರವೂ ಮುಂದುವರೆದಿದ್ದು, ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರಿನಿಂದಲೂ ಮುಖ್ಯಮಂತ್ರಿ ಚಂದ್ರು, ಡಾ. ಕೆ. ಮರಳಸಿದ್ದಪ್ಪ, ಪ್ರೊ. ಜಿ.ಕೆ. ಗೋವಿಂದರಾವ್, ಡಾ. ವಿಜಯಾಂಭ, ಡಾ. ವಸುಂಧರ ಭೂಪತಿ, ಪ್ರೊ. ಚಂಪಾ, ಡಾ. ಬಿ.ಟಿ. ಲಲಿತಾ ನಾಯಕ್, ಡಾ. ನಲ್ಲೂರು ಪ್ರಸಾದ್ ಸೇರಿದಂತೆ 35ಕ್ಕೂ ಹೆಚ್ಚು ಮಂದಿ ಬಸ್ನಲ್ಲಿ ಆಗಮಿಸಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರೆ, ಮೈಸೂರಿನ ರಂಗಾಯಣ ಹಾಗೂ ಹವ್ಯಾಸಿ ರಂಗ ತಂಡದ ಕಲಾವಿದರು ಮೈಸೂರಿನಿಂದ ವಾಹನದಲ್ಲಿ ಸಾಹಿತಿ ಕಾಳೇಗೌಡ ನಾಗವಾರ ಹಾಗೂ ಮೈಸೂರು ರಂಗಾಯಣ ನಿರ್ದೇಶಕ ಎಚ್. ಜನಾರ್ದನ (ಜನ್ನಿ) ನೇತೃತ್ವದಲ್ಲಿ ಆಗಮಿಸಿ ಧರಣಿ ನಡೆಸಿ ಸಾಥ್ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಅಪ್ಪಾಜಿಗೌಡ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಕಾವೇರಿ ಹೋರಾಟ ಬೆಂಬಲಿಸಿ ಕ್ರಾಂತಿ ಯುವ ವೇದಿಕೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು. ಮಾಜಿ ಶಾಸಕರಾದ ಎಂ.ಎಸ್. ಆತ್ಮಾನಂದ, ಜಿ.ಬಿ. ಶಿವಕುಮಾರ್, ಎಂ. ಶ್ರೀನಿವಾಸ್, ಅಂಬುಜಮ್ಮ, ಸಿದ್ದರಾಮೇಗೌಡ, ಎನ್. ರಾಜು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಾಹಿತಿ ಡಾ. ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿ ಕಾನೂನನ್ನು ಪರಿಪಾಲನೆ ಮಾಡುವುದು ಅಗತ್ಯ. ಆದರೆ ಅನ್ಯಾಯದ ಕಾನೂನು ಬಂದಲ್ಲಿ ಅದನ್ನು ಭಂಗ ಮಾಡುವ ಹೋರಾಟವನ್ನೂ ರೂಪಿಸುವುದು ಅಗತ್ಯ ಎಂದರು. ಈ ಹಿಂದೆ ಗೋಕಾಕ್ ಚಳವಳಿ ರಾಜ್ಯದಲ್ಲೇ ಅತಿ ದೊಡ್ಡ ಚಳವಳಿಯಾಗಿತ್ತು. ಅದೇ ಮಾದರಿಯಲ್ಲಿ ಇಂದು ಕಾವೇರಿ ಹೋರಾಟ ನಡೆಸುವ ಅಗತ್ಯತೆ ಇದೆ. ಹಿಂದೆ ಗೋಕಾಕ್ ಚಳವಳಿಯನ್ನು ಜಿಲ್ಲೆಯ ಮುತ್ಸದ್ದಿ ನಾಯಕರಾಗಿದ್ದ ಕೆ.ವಿ. ಶಂಕರಗೌಡರು ನೇತೃತ್ವ ವಹಿಸಿಕೊಂಡಿದ್ದರು. ಈಗ ಕಾವೇರಿ ಚಳವಳಿಗೆ ಜಿ. ಮಾದೇಗೌಡರು ನಾಯಕತ್ವ ವಹಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಸಿ ನಮ್ಮ ಕೂಗು ದೆಹಲಿ ಮುಟ್ಟುವ ರೀತಿಯಲ್ಲಿ ಚಳವಳಿ ನಡೆಸಬೇಕು ಎಂದು ಕರೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ ಪರವಾಗಿ ಲೋಕಸಭೆಯಲ್ಲಿ ಧನಿ ಎತ್ತಬೇಕಾದ ಸಂಸದರು ಸಹ ತಾತ್ಸಾರ ಮನೋಭಾವನೆ ಹಾಗೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಅದೇ ರೀತಿ ವಿಧಾನ ಮಂಡಲದ ಅಧಿವೇಶನದಲ್ಲೂ ಅದೇ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ವಿಚಾರವಾದಿ ಪ್ರೊ. ಜಿ.ಕೆ. ಗೋವಿಂದರಾವ್ ಮಾತನಾಡಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕಾವೇರಿ ತೀರ್ಪಿನಲ್ಲಿ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನೀಡಿದ್ದಕಿಂತಲೂ ಉಗ್ರವಾದ ಪ್ರತಿಕ್ರಿಯೆ ನೀಡಲು ನಮಗೂ ಬರುತ್ತೆ. ರಾಗ ದ್ವೇಷ, ಆಸೆ, ಆಮಿಷ ಎನ್ನುವುದು ನ್ಯಾಯಾಧೀಶರಿಗೂ ಇರುತ್ತೆ ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದು ಟೀಕಿಸಿದರು.

See also  ರಾಜ್ಯ ಸರ್ಕಾರದಿಂದ ರಿಯಲ್ ಎಸ್ಟೇಟ್ ಗೆ ದೊಡ್ಡ ಮಟ್ಟದ ಪ್ರೋತ್ಸಾಹ

ಹಣ ನೀಡದೆ ಪ್ರಯಾಣಿಸಿದ ಹೋರಾಟಗಾರರು

ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಗುರುವಾರದಿಂದ ಅಸಹಾಕಾರ ಚಳವಳಿ ಆರಂಭಿಸಿದ್ದು, ಸಾರಿಗೆ ಸಂಸ್ಥೆಯ ಬಸ್ನಲ್ಲಿ ಹೋರಾಟಗಾರರು ಹಣ ನೀಡದೆ ಪ್ರಯಾಣಿಸಿದರು.

ಮಂಡ್ಯದಿಂದ ಶ್ರೀರಂಗಪಟ್ಟಣಕ್ಕೆ ನಾಲ್ಕು ಬಸ್ ಗಳಲ್ಲಿ ತೆರಳಿದ ಹೋರಾಟಗಾರರು ಹಣ ನೀಡಲಿಲ್ಲ. ಈ ವಿಷಯ ತಿಳಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇಂಡುವಾಳು ಗೇಟ್ ಬಳಿ ಚಳವಳಿನಿರತರನ್ನು ತಡೆದು, ಟಿಕೆಟ್ ಪಡೆದು ಪ್ರಯಾಣಿಸುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭ ಅಧಿಕಾರಿಗಳು ಹಾಗೂ ಚಳವಳಿಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವಿಷಯವನ್ನು  ಸಮಿತಿಯ ಅಧ್ಯಕ್ಷ ಮಾದೇಗೌಡ ಅವರಿಗೆ ತಿಳಿಸಿದಾಗ, ಸಂಚಾರ ನಿಯಂತ್ರಣಾಧಿಕಾರಿ ಮಾದೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಮಾದೇಗೌಡರ ಮಾತಿಗೆ ಹೆದರಿದ ಅಧಿಕಾರಿಗಳು ಚಳವಳಿಗಾರರನ್ನು ಬಿಡುಗಡೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು