ಬೆಂಗಳೂರು: ಬೀದಿಪಾಲಾಗುತ್ತಿದ್ದ ನನ್ನ ಜೀವನವನ್ನು ಒಂದು ಮಟ್ಟಕ್ಕೇರಿಸಿ, ಉತ್ತಮ ಶಿಕ್ಷಣವನ್ನು ನೀಡಿ ನನ್ನ ಜೀವನವನ್ನೇ ಬದಲಾಯಿಸಿದ್ದು ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಕರ್ನಾಟಕದ ಎಂದು ನಾಗರತ್ನ ಎಂಬಾಕೆ ಹೇಳಿಕೊಂಡಿದ್ದಾರೆ.
ನಾನು ಈವತ್ತು ಎಲ್ ಎಲ್ ಬಿ ವ್ಯಾಸಂಗ ಮಾಡಿ ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಎಂದರೇ ಅದಕ್ಕೆ ಕಾರಣ ಜಯಲಲಿತಾ. ಅವರು ನನಗೆ ದೇವರು ಕೊಟ್ಟ ಉಡುಗೊರೆ. ನಾನು ಮೈಸೂರಿನಲ್ಲಿ 10 ನೇ ತರಗತಿ ವರೆಗೆ ವ್ಯಾಸಂಗ ನಡೆಸುತ್ತಿದ್ದೆ. ನಮಗೆ ಇರಲು ಮನೆ ಇರಲಿಲ್ಲ. ಶಾಲೆಯಿಂದ ಬಂದ ಮೇಲೆ ಭಿಕ್ಷೆ ಬೇಡಲು ತೆರಳುತ್ತಿದ್ದೆ. ಬೀದಿ ದೀಪದ ಕೆಳಗೆ ಕುಳಿತು ಓದಿ 10 ನೇ ತರಗತಿಯನ್ನು ಶೇ.65 ರಷ್ಟು ಅಂಕಗಳೊಂದಿಗೆ ಪಾಸು ಮಾಡಿದೆ. ಮುಂದೆ ಓದಲು ನನಗೆ ಸಾಧ್ಯವಿಲ್ಲವಾದ್ದರಿಂದ ಭಿಕ್ಷೆ ಬೇಡಿ ಪೋಷಕರಿಗೆ ಸಹಾಯ ಮಾಡಲು ನಿರ್ಧರಿಸಿದ್ದೆ.
2001ರಲ್ಲಿ ನನ್ನ ಬಗ್ಗೆ ಪತ್ರಿಕೆಯೊಂದರಲ್ಲಿ ಓದಿದ ಜಯಲಲಿತಾ ಅವರು, ನನಗೆ ಸಹಾಯ ಮಾಡಲು ನಿರ್ಧರಿಸಿ, ಕರ್ನಾಟಕ ಎಐಎಡಿಎಂಕೆ ಮುಖಂಡ ಪುಗಳೇಂದಿ ಅವರಿಗೆ ಕರೆ ಮಾಡಿ ನನ್ನನ್ನು ಕರೆ ತರುವಂತೆ ತಿಳಿಸಿದ್ದರು. ಮೈಸೂರಿಗೆ ಆಗಮಿಸಿದ ಪುಗಳೇಂದಿ ನನ್ನನ್ನು ಹುಡುಕಿ ಚೆನ್ನೈ ಗೆ ಕರೆದೊಯ್ದರು.ಅಲ್ಲಿ ಚೆನ್ನೈ ನ ಪಾಂಡ್ಯನ್ ಹೊಟೇಲ್ ನಲ್ಲಿ ಇರಿಸಲಾಯಿತು. ಸಂಜೆ ಜಯಲಲಿತಾ ಅವರನ್ನು ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಸಿಕ್ಕಿತು. ನನ್ನ ಕಥೆ ಕೇಳಿದ ಜಯಲಲಿತಾ ಅವರು ನನಗೆ 1 ಲಕ್ಷ ರು ಚೆನ್ ನೀಡಿ ವಿಧ್ಯಾಭ್ಯಾಸ ಮುಂದುವರಿಸುವಂತೆ ಹೇಳಿದರು. ಮತ್ತೆ ಹಣದ ಅವಶ್ಯಕತೆ ಬಂದರೆ ಸಹಾಯ ಮಾಡುವ ಭರವಸೆ ನೀಡಿದರು.
ಜಯಲಲಿತಾ ಅವರು ನೀಡಿದ ಹಣದಿಂದ ನಾನು ಉತ್ತಮ ಶಿಕ್ಷಣವನ್ನು ಪಡೆದ. ನನ್ನ ಭವಿಷ್ಯವನ್ನು ರೂಪಿಸಿದ ಜಯಲಲಿತಾ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಬೇಕೆಂದು ಅಂದುಕೊಂಡಿದ್ದೆ. ಆದರೆ ಆ ಆಸೆ ಈಡೇರದೆ ಹಾಗೇಯೇ ಉಳಿದುಹೋಯಿತು ಎಂದು ಬೇಸರದಿಂದ ಹೇಳಿದರು.