ಬೆಂಗಳೂರು: ಮಹದಾಯಿ ವಿವಾದ ಕುರಿತಂತೆ ಚರ್ಚೆ ನಡೆಸಲು ತಮಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಸಮಯವನ್ನು ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹದಾಯಿ ವಿವಾದ ಕುರಿತಂತೆ ಚರ್ಚಿಸಲು ನಿನ್ನೆ ಪ್ರಧಾನಿ ಬಳಿ ಸಮಯ ಕೇಳಿದ್ದೆವು. ಆದರೆ ಸಂಸತ್ ಕಲಾಪದ ನೆಪವೊಡ್ಡಿ ಮತ್ತೆ ಸಮಯ ನೀಡಿಲ್ಲ. ಮುಂದಿನ ದಿನಗಳಲ್ಲಿ ಸಮಯ ನೀಡುವುದಾಗಿ ತಿಳಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ರಾಜ್ಯಗಳಿಗೆ ನೀಡಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯದ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವ ಕೆಲಸವನ್ನು ರಾಜ್ಯದ ಬಿಜೆಪಿ ನಾಯಕರು ಮಾಡುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಒಕ್ಕೂಟ ವ್ಯವಸ್ಥೆ ಎಂದರೇನು ಎಂದು ತಿಳಿದಿಲ್ಲ ಎನಿಸುತ್ತಿದೆ. ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಮಸ್ಯೆಯನ್ನು ತಿಳಿಸುವ ಕಾರ್ಯಕ್ಕೆ ಅವರು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.