ಬೆಂಗಳೂರು: ಬೆಂಗಳೂರು-ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ಅಕ್ರಮವನ್ನು ಸಿಬಿಐ ತನಿಖೆ ವಹಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.
‘ನೈಸ್’ ಕಂಪನಿ ಮಾಲೀಕರು ನಯಾಪೈಸೆ ಖರ್ಚು ಮಾಡದೆ ಅಮಾಯಕ ರೈತರು ಹಾಗೂ ಸರಕಾರದ ಸಾವಿರಾರು ಎಕರೆ ಪಡೆದುಕೊಂಡು ವಂಚಿಸಿದ್ದಾರೆ. ಸರಕಾರ ಬೆಂಗಳೂರಲ್ಲಿ ಬಡವರ ಮನೆ ಧ್ವಂಸ ಮಾಡಿದಂತೆ ನೈಸ್ನ ಬಡಾವಣೆಗಳನ್ನು ತೆರವು ಮಾಡಲಿ. ಸಿಎಂ ಸಿದ್ದರಾಮಯ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬಿಎಂಐಸಿ ಯೋಜನೆಯಲ್ಲಿ ನೈಸ್ ಕಂಪನಿ ಅಕ್ರಮ ನಡೆಸಿರುವುದು ಸದನ ಸಮಿತಿ ತನಿಖೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಸರಕಾರ ಸ್ವಾಧೀನಕ್ಕೆ ತೆಗೆದುಕೊಂಡು, ಹಗರಣದ ಸಮಗ್ರ ವಿವರ ಬಯಲಿಗೆ ಬರಲು ಸಿಬಿಐ ತನಿಖೆ ನಡೆಸಬೇಕು ಎಂದರು.