ಬೆಳಗಾವಿ: ತಂದೆಯೇ ಯೋಧನಾಗಿರುವ ಮಗನ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೈಲಹೊಂಗಲ ಸಮೀಪದ ನಯಾ ನಗರದಲ್ಲಿ ನಡೆದಿದೆ.
ಈರಣ್ಣ ವಿಠಲ ಇಂಡಿ (21) ತಂದೆಯ ಗುಂಡಿಗೆ ಬಲಿಯಾಗಿರುವ ಯೋಧ. ಮೃತಪಟ್ಟ ಯೋಧ ಬೆಂಗಳೂರಿನ ಎಂಇಸಿ ಸೆಂಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈರಣ್ಣನ ತಂದೆ ವಿಠಲ ಇಂಡಿ (68) ಎಂಬಾತ ಯೋಧನನ್ನು ಹತ್ಯೆ ಮಾಡಿದ್ದಾನೆ. ಈರಣ್ಣ ಕಳೆದ ಒಂದು ವರ್ಷದಿಂದ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ನಿನ್ನೆ ರಾತ್ರಿ ಬೆಂಗಳೂರಿನಿಂದ ಮನೆಗೆ ಆಗಮಿಸಿದ್ದು, ರಾತ್ರಿ ಎಲ್ಲರೂ ಮನೆಯಲ್ಲಿರುವಾಗ ತಂದೆ ವಿಠಲ ಮನೆಗೆ ಬಂದು ಹೊಸ ವಾಹನ ಖರೀದಿಸಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿ ವಿಠಲ ಇಂಡಿ ಹಾರಿಸಿದ ಗುಂಡಿಗೆ ಪುತ್ರ ಯೋಧ ಈರಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈರಣ್ಣನ ಎದೆಗೆ ಎರಡೂ ಗುಂಡು ತಗುಲಿವೆ. ಘಟನೆಯಲ್ಲಿ ಈರಣ್ಣನ ತಾಯಿ ಅನುಸೂಯಾ(40)ಗೆ ಮೂರು ಗುಂಡು ಹಾಗೂ ಸಹೋದರಿ ಪ್ರೀತಿ (19) ಗೆ ಒಂದು ಗುಂಡು ಸಹ ತಗಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ವಿಠಲ ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊಳೆಯಿಂಗಳ ಗ್ರಾಮದವನು. ಕಳೆದ 21 ವರ್ಷಗಳ ಹಿಂದೆ ಬೈಲಹೊಂಗಲ ಪಟ್ಟಣದ ಸಮೀಪದಲ್ಲಿರುವ ನಯಾ ನಗರ ಗ್ರಾಮದ ಅನುಸೂಯಾ ಎಂಬುವರನ್ನು ಮದುವೆಯಾಗಿದ್ದ. ಆರೋಪಿ ವಿಠಲಗೆ ಇಬ್ಬರು ಪತ್ನಿಯರಿದ್ದು, ಎರಡನೇ ಪತ್ನಿಗೆ ಆಸ್ತಿ ನೀಡುವಂತೆ ಮತ್ತು ಪುತ್ರನಿಗೆ ಹಣ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.
ಘಟನೆಯ ನಂತರ ಆರೋಪಿ ವಿಠಲ ಪರಾರಿಯಾಗಿದ್ದು, ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.