ಮಂಡ್ಯ: ಮದ್ದೂರು ಬಳಿಯ ಕಾರು ಚಾಲಕ ಕೆ.ಸಿ. ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಬರೆದಿದ್ದ ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಮತ್ತು ಮನೆಯ ಕಾರು ಚಾಲಕ ಮಹಮದ್ ನನ್ನು 5 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲು ಮದ್ದೂರಿನ 2ನೇ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ರಮೇಶ್ ಆತ್ಮಹತ್ಯೆ ಬಳಿಕ ಅದಕ್ಕೆ ಕಾರಣರೆನ್ನಲಾದ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಮತ್ತು ಮನೆಯ ಕಾರು ಚಾಲಕ ಮಹಮದ್ ನಾಪತ್ತೆಯಾಗಿದ್ದರು. ಅಲ್ಲದೆ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಈ ನಡುವೆ ಈ ಇಬ್ಬರು ಆರೋಪಿಗಳನ್ನು ಮಳವಳ್ಳಿ ಗ್ರಾಮಾಂತರ ಪಿಎಸ್ಐ ರವಿಕುಮಾರ್ ನೇತೃತ್ವದ ತಂಡ ಕಲಬುರಗಿಯಲ್ಲಿ ಬಂಧಿಸಿ, ದಸ್ತಗಿರಿಗೆ ಸಂಬಂಧಿಸಿದ ವಿಧಿ-ವಿಧಾನಗಳನ್ನು ಪೂರೈಸಿದ ಬಳಿಕ ಸೋಮವಾರ ಬೆಳಗ್ಗೆ ಮದ್ದೂರಿಗೆ ಕರೆತಂದು, ಸಿಐಡಿ ಪೊಲೀಸರಿಗೆ ಒಪ್ಪಿಸಿದರು.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಸಿಐಡಿ ಎಸ್ಪಿ ಹಿಡಾ ಮಾರ್ಟಿನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ತಾಲೂಕಿನ ಸೋಮನಹಳ್ಳಿಯ ಹೊರವಲಯದ ತೋಟದ ಮನೆಯಲ್ಲಿ ನಿರಂತರ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಬಳಿಕ ಪಟ್ಟಣದ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಸಂಜೆಯ ವೇಳೆಗೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ನಂತರ 2ನೇ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಅವರ ಮುಂದೆ ಇಬ್ಬರು ಆರೋಪಿಗಳನ್ನು ಹಾಜರುಪಡಿಸಲಾಯಿತು.
ವಿಚಾರಣೆ ವೇಳೆಯಲ್ಲಿ ಸಿಐಡಿ ಪೊಲೀಸ್ ಅಧಿಕಾರಿಗಳು ಕಪ್ಪು ಹಣವನ್ನು ಬಿಳಿ ಮಾಡಿರುವ ಆರೋಪ ಎದುರಿಸುತ್ತಿರುವ ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಹಾಗೂ ಕಾರು ಚಾಲಕ ಮಹಮದ್ ನನ್ನು ವಿಚಾರಣೆ ನಡೆಸಬೇಕಾಗಿದ್ದು, 7 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಧೀಶ ಪ್ರಕಾಶ್ ಅವರನ್ನು ಕೋರಿದರು. ಆದರೆ, ನ್ಯಾಯಾಧೀಶ ಪ್ರಕಾಶ್ ಅವರು ಕೇವಲ 5 ದಿನ ಮಾತ್ರ ಇಬ್ಬರು ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ನೀಡಲು ಮಾತ್ರ ಒಪ್ಪಿಗೆ ಸೂಚಿಸಿದರು. ಅದರಂತೆ ಆರೋಪಿಗಳಾದ ಭೀಮಾ ನಾಯ್ಕ್ ಹಾಗೂ ಕಾರು ಚಾಲಕ ಮಹಮದ್ನನ್ನು ವಶಕ್ಕೆ ಪಡೆದಿರುವ ಸಿಐಡಿ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತದೆ. ಇದರಲ್ಲಿ ಇನ್ನೆಷ್ಟು ಮಂದಿ ಪಾಲುದಾರರಾಗಿದ್ದಾರೆ ಮುಂತಾದ ಮಾಹಿತಿಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಸತ್ಯಾಸತ್ಯತೆ ತನಿಖೆ ಬಳಿಕವಷ್ಟೆ ಹೊರಕ್ಕೆ ಬರಬೇಕಾಗಿದೆ.