ಬೆಂಗಳೂರು: ಅಬಕಾರಿ ಸಚಿವ ಹೆಚ್. ವೈ. ಮೇಟಿ ರಾಸಲೀಲೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅವರು ನಡೆಸಿದ ರಾಸಲೀಲೆ ಸಿಡಿ ಬುಧವಾರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.ಈ ಹಿಂದೆ ತಮ್ಮ ವಿರುದ್ಧದ ರಾಸಲೀಲೆ ಸಿಡಿ ಬಿಡುಗಡೆಯಾದರೆ, ತಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಮೇಟಿ ಹೇಳಿದ್ದರು. ಅದರಂತೆ ಈಗ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಮೇಟಿ ಅವರು ರಾಜಿನಾಮೆ ಪತ್ರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ, ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮೇಟಿ ಅವರಿಗೆ ಸೂಚಿಸಿದ್ದು, ಸಿಎಂ ಸೂಚನೆಯಂತೆ ರಾಜಿನಾಮೆ ನೀಡಿದ್ದಾರೆ.
ರಾಸಲೀಲೆ ಸಿಡಿಯೇ ಇಲ್ಲ ಎಂದು ಮೇಟಿ ಸಾರಸಗಟಾಗಿ ಅಲ್ಲಗಳೆದಿದ್ದರು. ಆ ನಿಟ್ಟಿನಲ್ಲಿ ಈಗ ರಾಸಲೀಲೆ ಸಿಡಿ ಇರೋದು ಸತ್ಯವಾಗಿದೆ. ಸಚಿವರ ರಾಸಲೀಲೆಯದ್ದು ಎನ್ನಲಾದ ಸಿಡಿ 3 ನಿಮಿಷ 23ಸೆಕೆಂಡ್ ಇದೆ. ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಅವರು ನವದೆಹಲಿಯಲ್ಲಿ ಸಿಡಿಯನ್ನು ಬಿಡುಗಡೆ ಮಾಡಿರುವುದಾಗಿ ವರದಿ ಹೇಳಿದೆ.
ಬಾಗಲಕೋಟೆಯಲ್ಲಿ ರಾಸಲೀಲೆಯ ವೀಡಿಯೊದಲ್ಲಿದ್ದಾರೆ ಎನ್ನಲಾದ ವಿಜಯಲಕ್ಷ್ಮೀ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದರು. ‘ನನಗೂ, ಮೇಟಿ ಅವರಿಗೂ ತಂದೆ-ಮಗಳ ಸಂಬಂಧ ಬಿಟ್ಟರೆ ಬೇರೆ ಯಾವುದೇ ರೀತಿ ಸಂಬಂಧವಿಲ್ಲ’ ಎಂದು ತಿಳಿಸಿದ್ದರು. ಸುದ್ದಿಗೋಷ್ಠಿ ಬಳಿಕ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಬಳಿಗೆ ಹೋಗಿ, ‘ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ’ ಎಂದು ಮೌಖಿಕವಾಗಿ ಕೇಳಿಕೊಂಡಿದ್ದರು. ಪೊಲೀಸ್ ರಕ್ಷಣೆಯಲ್ಲಿ ಜಿಲ್ಲಾಸ್ಪತ್ರೆಗೆ ತೆರಳಿ, ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ವಿಜಯಲಕ್ಷ್ಮೀ ರಾತ್ರೋರಾತ್ರಿ ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಬೆಳವಣಿಗೆ ಆಗುತ್ತಿದ್ದಂತೆಯೇ ವಿಜಯಲಕ್ಷ್ಮೀ ಅವರು ಸೆಕ್ಸ್ ವೀಡಿಯೊ ಬಗ್ಗೆ ಮಾತನಾಡಿದ ವೀಡಿಯೊ ತುಣುಕೊಂದು ಮಾಧ್ಯಮಗಳಿಗೆ ಬಿಡುಗಡೆಯಾಗಿತ್ತು. ಅದರಲ್ಲಿ ಅವರು, ‘ಮೇಟಿ ಅವರೊಂದಿಗಿನ ಸೆಕ್ಸ್ ವೀಡಿಯೊ ಇದೆ. ಅದರಲ್ಲಿ ಭಾಗಿಯಾಗಿರುವುದು ನಾನೇ. ಆ ವೀಡಿಯೊ ಇಟ್ಟುಕೊಂಡು ಪೇದೆ ಸುಭಾಷ್ ಮುಗಳಖೋಡ ನನಗೆ ಹಾಗೂ ಮೇಟಿ ಅವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಒಂದು ವೇಳೆ ಈ ವೀಡಿಯೊ ಏನಾದರೂ ಬಹಿರಂಗಗೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ. ಇದಕ್ಕೆ ಸಚಿವ ಎಚ್.ವೈ. ಮೇಟಿ ಹಾಗೂ ಅವರ ಪೊಲೀಸ್ ಪೇದೆ ಸುಭಾಷ್ ಹೊಣೆ’ ಎಂದು ಹೇಳಿದ್ದರು. ಈ ಇಡೀ ಪ್ರಕರಣದಲ್ಲಿ ವಿಜಯಲಕ್ಷ್ಮೀ ಅವರು ಹಲವು ಬಾರಿ ಹೇಳಿಕೆಗಳನ್ನು ಬದಲಿಸಿದ್ದಾರೆ. ರವಿವಾರ ಸುದ್ದಿಗೋಷ್ಠಿ ನಡೆಸಿದ್ದ ಅವರು ಲೈಂಗಿಕ ಕಿರುಕುಳ ಕುರಿತು ವೀಡಿಯೊದಲ್ಲಿ ಮಾತನಾಡಿದ ಮಹಿಳೆ ನಾನಲ್ಲ ಎಂದಿದ್ದರು. ಮಂಗಳವಾರದಂದು ನನ್ನಿಂದ ಬಲವಂತವಾಗಿ ಮೇಟಿ ಅವರೊಂದಿಗೆ ಸಂಬಂಧವಿರುವ ಹೇಳಿಕೆ ಪಡೆಯಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದರು.
ಸಚಿವ ಹೆಚ್. ವೈ. ಮೇಟಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿಯನ್ನು ಭೇಟಿಯಾದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸಿಎಂ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.