ಬೆಂಗಳೂರು: ಸಂಖ್ಯಾಶಾಸ್ತ್ರ ತರಬೇತಿಗೆ ಬಂದಿದ್ದ ಆಂಧ್ರಪ್ರದೇಶ ಮೂಲದ ಮಹಿಳೆ ಮೇಲೆ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ ಅತ್ಯಾಚಾರಕ್ಕೆ ಯತ್ನಿಸಿದ್ದು,ಗುರೂಜಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕಳೆದ ಆಗಸ್ಟ್ 21ರಂದು ತಮ್ಮ ನಿವಾಸಕ್ಕೆ ಸಂಖ್ಯಾಶಾಸ್ತ್ರ ತರಬೇತಿಗೆ ಬಂದಿದ್ದ ಆಂಧ್ರಪ್ರದೇಶ ಮೂಲದ ಮಹಿಳೆ ಮೇಲೆ ಗುರೂಜಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಡಿಸೆಂಬರ್ 10ರಂದು ಮಹಿಳೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಲೈಂಗಿಕ ಕಿರುಕುಳ, ವಂಚನೆ, ಪ್ರಾಣಬೆದರಿಕೆ ದೂರು ದಾಖಲಿಸಿದ್ದರು. ಐ.ಪಿ.ಸಿ. ಸೆಕ್ಷನ್ 354, 420, 506, 504 ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರೂಜಿ ಬಂಧನಕ್ಕೆ 2 ವಿಶೇಷ ತಂಡಗಳನ್ನು ರಚಿಸಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಗುರೂಜಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ಸ್ ಪೆಕ್ಟರ್ ಶಿವಾರೆಡ್ಡಿ ನೇತೃತ್ವದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸರ ತಂಡ ತಮಿಳುನಾಡಿನಲ್ಲಿ ಕಾರ್ಯಚರಣೆ ನಡೆಸಿ ಆರ್ಯವರ್ಧನ ಗುರೂಜಿಯವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.