ಮಾಗಡಿ: ಸಾಲಗಾರರ ಕಿರುಕುಳ ಸಹಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ಪಟ್ಟಣದ ತಿರುಮಲೆ ನಿವಾಸಿ ಬೆಳ್ಳುಳ್ಳಿ ರಾಜಣ್ಣ (ರಾಜಶೇಖರ್) (45) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ಪಟ್ಟಣದ ಕೋಟೆ ಮಾರಮ್ಮ ದೇವಸ್ಥಾನದ ಹತ್ತಿರ ತನ್ನ ಕಾರಿನಲ್ಲೆ 5 ಪುಟದ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲಗಾರರು ನಿತ್ಯ ಹಿಂಸಿಸುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಚೀಟಿ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದು ಶೇ.10ಕ್ಕೂ ಹೆಚ್ಚು ಬಡ್ಡಿ ದರದಲ್ಲಿ ಸಾಲ ಪಡೆದಿದ್ದು ಸಾಲಗಾರರ ಹಿಂಸೆ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಾಜಶೇಖರ್ ಧರ್ಮಪತ್ನಿ ಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆ ವಿವರ: ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಕಾರಿನಲ್ಲಿ ವಿಷ ಸೇವಿಸಿ ತನ್ನ ಸ್ನೇಹಿತ ನಾಗರಾಜು ರವರಿಗೆ ದೂರವಾಣಿ ಮೂಲಕ ವಿಷ ಸೇವಿಸಿರುವ ವಿಷಯ ತಿಳಿಸಿದ್ದಾರೆ, ತಕ್ಷಣವೇ ರಾಜಶೇಖರ್ ರವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲೇ ರಾಜಶೇಖರ್ ಮೃತ ಪಟ್ಟಿದ್ದು ರಾಜಶೇಖರ್ ನ ಧರ್ಮ ಪತ್ನಿ ಲಕ್ಷ್ಮಿ ರವರು ಅಕ್ರಮವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಎಂ.ಆರ್.ಕೃಷ್ಣಪ್ಪ, ಪುಟ್ಟಸ್ವಾಮಯ್ಯ, ಎಲೆ ಜಯಮ್ಮ, ವೇಣುಗೋಪಾಲ, ದಯಾನಂದ್, ಯೋಗೇಶ್, ತಮ್ಮಯ್ಯ, ಮೋಹನಪ್ಪ, ಮುನಿಯಪ್ಪ, ಉಮೇಶ್, ಇತರರ ವಿರುದ್ದ ದೂರು ನೀಡಿದ್ದು, ಮಾಗಡಿ ಸಿಪಿಐ ನಂದೀಶ್ 306 ಮತ್ತು 149 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 10 ಜನ ಆರೋಪಿಗಳು ನಾಪತ್ತೆಯಾಗಿದ್ದು ತನಿಖೆ ಕೈಗೊಂಡಿದ್ದಾರೆ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.