ಬೆಂಗಳೂರು: ರಾಷ್ಟ್ರೀಯ ತನಿಖಾ ದಳ (ಎನ್ ಐಎ) ತನ್ನ ಚಾರ್ಜ್ ಶೀಟ್ ನಲ್ಲಿ ಪಾಕಿಸ್ತಾನ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನನ್ನು ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ಪ್ರಮುಖ ಆರೋಪಿ ಎಂದು ಹೇಳಿದೆ.
ದೆಹಲಿಯಲ್ಲಿ 2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದ ಆರೋಪವನ್ನು ಕೂಡ ಈ ಉಗ್ರ ಸಂಘಟನೆ ಹೊಂದಿದೆ.
ಜೈಷ್-ಏ-ಮೊಹಮದ್ ಉಗ್ರ ಸಂಘಟನೆ ಆರಂಭಿಸಿದ ಮೌಲಾನಾ ಮಸೂದ್ ಅಜರ್ ಸೇರಿದಂತೆ ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಶಹೀದ್ ಲತಿಫ್ ಹೆಸರು ಕೂಡಾ ದೋಷಾರೋಪಣ ಪಟ್ಟಿಯಲ್ಲಿದ್ದು, ಒಟ್ಟು ಐವರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಹಾಕಿದೆ.
ನಾಸೀರ್ ಹುಸೇನ್, ಹಫೀಜ್ ಅಬು ಬಾಕರ್, ಉಮರ್ ಫರೂಕ್ ಹಾಗೂ ಅಬ್ದುಲ್ ಖಯ್ಯಾಮ್ ಪಠಾಣ್ ಕೋಟ್ ದಾಳಿ ನಡೆಸಿದ ಆರೋಪ ಹೊಂದಿದ್ದು, ಅನೇಕ ಸೆಕ್ಷನ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ.