ದಿಡ್ಡಳ್ಳಿ: ನಿರಾಶ್ರಿತ ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
ಮಂಗಳವಾರ ಸಂಜೆ ದೇವಮಚ್ಚಿ ಮೀಸಲು ಅರಣ್ಯ ವ್ಯಾಪ್ತಿಯ ದಿಡ್ಡಳ್ಳಿಯಲ್ಲಿ 13 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ 577 ಆದಿವಾಸಿ ಕುಟುಂಬಗಳನ್ನು ಭೇಟಿಯಾದಗ ಯಡಿಯೂರಪ್ಪ, ಆದಿವಾಸಿಗಳೇ ಕಾಡಿನ ನಿಜವಾದ ರಕ್ಷಕರಾಗಿದ್ದು ಅರಣ್ಯಾಧಿಕಾರಿಗಳು ಅರಣ್ಯ ಭಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಕಾಡಿನ ರಕ್ಷಕರಾಗಿರುವ ಆದಿವಾಸಿಗಳನ್ನು ಅತ್ಯಂತ ಅಮಾನವೀಯವಾಗಿ ಕಾಡಿನಿಂದ ಹೊರಹಾಕಿದ ಕ್ರಮ ಖಂಡನೀಯ ಎಂದು ಟೀಕಿಸಿದರು. ಗುಡಿಸಲು ಕಿತ್ತುಕೊಂಡು ಮುಗ್ದ ಆದಿವಾಸಿಗಳನ್ನು ಬೀದಿ ಪಾಲು ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಯಾವುದೇ ಸಚಿವರನ್ನು ದಿಡ್ಡಳ್ಳಿಗೆ ಕಳುಹಿಸುವ ಬದಲಿಗೆ ಖುದ್ದು ಮುಖ್ಯಮಂತ್ರಿಗಳೇ ಸ್ಥಳಕ್ಕೆ ಭೇಟಿ ನೀಡಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.
ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಆದಿವಾಸಿಗಳ ವಿಚಾರದಲ್ಲಿ ನಡೆದುಕೊಂಡ ರೀತಿ ಖಂಡನೀಯವಾಗಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸಲೆಂದೇ ತಾನು ದಿಡ್ಡಳ್ಳಿಗೆ ಭೇಟಿ ನೀಡಿರುವುದಾಗಿ ಯಡಿಯೂರಪ್ಪ ಹೇಳಿದರು. ನಿರಾಶ್ರಿತರಾದ ಆದಿವಾಸಿಗಳ ಹೋರಾಟದ ಉದ್ದೇಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಯಡಿಯೂರಪ್ಪ ಒತ್ತಾಯಿಸಿದರು. ಸರ್ಕಾರ ತಡಮಾಡದೇ ನಿರಾಶ್ರಿತ ಆದಿವಾಸಿಗಳಿಗೆ ಅಗತ್ಯ ಜಮೀನು ನೀಡುವುದರೊಂದಿಗೆ ಮನೆ ನಿರ್ಮಿಸಿಕೊಡುವಂತೆಯೂ ಯಡಿಯೂರಪ್ಪ ಆಗ್ರಹಿಸಿದರು. ಬೇರೆ ಜನರಂತೆ ಆದಿವಾಸಿಗಳೂ ನೆಮ್ಮದಿಯ ಜೀವನ ಸಾಗಿಸಬೇಕು. ಸ್ವಾಭಿಮಾನಿ ಜೀವನ ಸಾಗಿಸುವ ನಿಟ್ಟಿನಲ್ಲಿ ಆದಿವಾಸಿಗಳಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳು ದೊರಕುವಂತಾಗಬೇಕು ಎಂದು ಹೇಳಿದ ಯಡಿಯೂರಪ್ಪ. ಆದಿವಾಸಿಗಳ ಪರ ತಾನಿರುವುದಾಗಿ ಭರವಸೆ ನೀಡಿ, ಆದಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮನೆ ಕಳೆದುಕೊಂಡ ಆದಿವಾಸಿಗಳ ವಿಚಾರವನ್ನು ತಾನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ತರುವುದಾಗಿ ಹೇಳಿದ ಯಡಿಯೂರಪ್ಪ, ಯಾರಿಗೂ ನಿಮ್ಮ ಗುಡಿಸಲು ಕೇಳುವ ಅಧಿಕಾರವಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದು ಒತ್ತಾಯಿಸಿದರು. ಯಡಿಯೂರಪ್ಪ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ರಾಜ್ಯ ಬಿಜೆಪಿ ಕ?ಷಿ ಮೋರ್ಚಾ ಅಧ್ಯಕ್ಷ ಸಿ.ಎಸ್.ವಿಜಯಶಂಕರ್, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಂ.ಶಿವಣ್ಣ, ಕೊಡಗು ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಪ್ರಧಾನ ಕಾಯ9ದಶಿ9 ಕಾಂತಿ ಸತೀಶ್, ಜೋಕಿಂ, ಲೋಕೇಶ್ ಕುಮಾರ್, ಸಿ.ಕೆ.ಬೋಪಣ್ಣ, ಅಜಿತ್ ಕರುಂಬಯ್ಯ ಸೇರಿದಂತೆ ಜಿಲ್ಲಾ ಬಿಜೆಪಿ ಪ್ರಮುಖರು ಹಾಜರಿದ್ದರು.
ಪುನರ್ವಸತಿ – ಆದಿವಾಸಿಗಳ ಮನವೊಲಿಸಿ
ಸರ್ಕಾರ ಈಗಾಗಲೇ ನೀಡಿರುವ ಜಮೀನಿಗೆ ತೆರಳಲು ಪ್ರತಿಭಟನಾನಿರತ ಆದಿವಾಸಿಗಳು ನಿರಾಕರಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಆದಿವಾಸಿಗಳ ಮನವೊಲಿಸುವ ಮೂಲಕ ಬೇರೆ ಜಮೀನಿಗೆ ಆದಿವಾಸಿಗಳಿಗೆ ಪುನರ್ವಸತಿ ನೀಡಬೇಕೆಂದೂ ಅಭಿಪ್ರಾಯಪಟ್ಟರು.ಮುಖ್ಯಮಂತ್ರಿಗಳಿಗೆ ಸ್ವಲ್ವವಾದರೂ ಜವಾಬ್ದಾರಿ ಇದ್ದಲ್ಲಿ ಕೂಡಲೇ ದಿಡ್ಡಳ್ಳಿಗೆ ಬಂದು ಆದಿವಾಸಿಗಳ ಸಮಸ್ಯೆ ಕೇಳುವಂತೆ ಯಡಿಯೂರಪ್ಪ ಒತ್ತಾಯಿಸಿದರು.
ಬಿಜೆಪಿಗೆ ಧಿಕ್ಕಾರ ಕೂಗಿದ ಪ್ರತಿಭಟನಾನಿರತರು
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಿಡ್ಡಳ್ಳಿಗೆ ಭೇಟಿ ನೀಡಿದ ಸಂದಭ9 ಆವರೆಗೂ ಸಕಾ9ರಕ್ಕೆ ದಿಕ್ಕಾರ ಕೂಗುತ್ತಿದ್ದ ಆದಿವಾಸಿಗಳು ಬಿಜೆಪಿಗೆ ಧಿಕ್ಕಾರ ಎಂದು ಕೂಗಿದರು. ಬೆಂಗಳೂರಿನಿಂದ ಪ್ರತಿಭಟನಾನಿರತರ ಆದಿವಾಸಿಗಳಿಗೆ ಬೆಂಬಲ ಸೂಚಿಸಿರುವ ಎನ್.ಜಿ.ಓ. ಸಂಸ್ಥೆಯ ಯುವತಿ ಮತ್ತು ತರುಣನೋರ್ವ ಯಡಿಯೂರಪ್ಪ ಬರುತ್ತಿರುವುದನ್ನು ಗಮನಿಸಿ ಬಿಜೆಪಿ ವಿರುದ್ದ ಧಿಕ್ಕಾರ ಕೂಗುವಂತೆ ಆದಿವಾಸಿಗಳನ್ನು ಪ್ರೇರೇಪಿಸಿದರು. ಬಿಜೆಪಿ ವಿರುದ್ದ ದಿಕ್ಕಾರ ಘೋಷಣೆ ಸಂಸದ ಪ್ರತಾಪ್ ಸಿಂಹ ಆಕ್ರೋಷಕ್ಕೆ ಕಾರಣವಾಯಿತು. ನಿಮ್ಮ ಸಮಸ್ಯೆ ಕೇಳಲು ಬಂದಾಗ ಧಿಕ್ಕಾರ ಕೂಗ್ತಿರಲ್ಲ ಎಂದು ಪ್ರತಾಪ್ ಸಿಂಹ ಅಸಮಧಾನ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಕೂಡ ಆಕ್ರೋಷದಿಂದ ಆದಿವಾಸಿಗಳಿಗೆ ಬೇರೇನೇನೋ ಹೇಳಿಕೊಡಬೇಡಿ. ನಿಜವಾದ ಆದಿವಾಸಿಗಳು ಮಾತ್ರ ಮಾತನಾಡಿ ಎಂದು ಹೇಳಿದರು.
ಆದಿವಾಸಿ ಮುಖಂಡರ ನಾಯಕತ್ವ ವಹಿಸಿರುವ ಜೇನು ಕುರುಬರ ಮುತ್ತಮ್ಮ ಮಾತನಾಡಿ, ನಾವು ಬೇರೆ ಕಡೆ ಖಂಡಿತಾ ಹೋಗುವುದಿಲ್ಲ.ನಮಗೆ ದಿಡ್ಡಳ್ಳಿಯಲ್ಲಿ ನಿವೇಶನ ನೀಡಿ ಎಂದು ಬೇಡಿಕೆ ಮುಂದಿಟ್ಟರು. ಸರ್ಕಾರ ಆದಿವಾಸಿಗಳಿಗೆಂದು ನೀಡುತ್ತಿರುವ ಕೋಟಿಗಟ್ಟಲೆ ಅನುದಾನ ಯಾರ ಪಾಲಾಗುತ್ತಿದೆ ಎಂದು ಮುತ್ತಮ್ಮ ತೀಕ್ಷ್ಮವಾಗಿ ಪ್ರಶ್ನಿಸಿದರು. ಬೀದಿಗೆ ಬಂದ ಸಂದರ್ಭ ತಾನು ಬೆತ್ತಲೆ ಪ್ರತಿಭಟನೆ ಮೂಲಕ ಮಾನ ಕಳೆದುಕೊಂಡಿದ್ದೇನೆ. ಹೀಗಾಗಿ ದಿಡ್ಡಳ್ಳಿ ಬಿಟ್ಟು ಬೇರೆ ಕಡೆ ತೆರಳುವ ಪ್ರಶ್ನೆಯೇ ಇಲ್ಲ ಎಂದು ಮುತ್ತಮ್ಮ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಭೇಟಿ ಸಂದರ್ಭ ಕೆಲವು ಪ್ರತಿಭಟಾನಿರತರು ಮಾಧ್ಯಮ ಪ್ರತಿನಿಧಿಗಳ ಬಗ್ಗೆಯೂ ಸಿಡಿಮಿಡಿಗೊಂಡು ಸ್ಥಳದಿಂದ ತೆರಳುವಂತೆ ಒತ್ತಾಯಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮಾಧ್ಯಮಗಳಿಂದಾಗಿಯೇ ನಿಮ್ಮ ಸಮಸ್ಯೆ ಹೊರಜಗತ್ತಿಗೆ ಗೊತ್ತಾಗಿದೆ. ಈಗ ನೀವೂ ಮಾಧ್ಯಮದವರ ವಿರುದ್ದವೇ ಸಿಟ್ಟು ಮಾಡ್ತಾರಲ್ಲ ಎಂದು ಮಾಧ್ಯಮಪರ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಬೆಂಗಳೂರಿನಿಂದ ಬಂದಿದ್ದ ಸರ್ಕಾರೇತರ ಸಂಸ್ಥೆಗಳ ಕೆಲವರು ಆದಿವಾಸಿಗಳನ್ನು ಸಮಧಾನಗೊಳಿಸಿ ಮಾಧ್ಯಮದವರ ವಿರುದ್ದ ಮಾತಾಡದಂತೆ ಕೋರಿದ ಘಟನೆಯೂ ನಡೆಯಿತು.