ಬೆಂಗಳೂರು: ರಾಷ್ಟ್ರ ಕಂಡ ಅಪ್ರತಿಮ ನಾಯಕ ಹಾಗೂ ದೇಶದ ಪ್ರತಿಭಾವಂತ ಪ್ರಧಾನಿಗಳಲ್ಲಿ ಒಬ್ಬರಾದ ಶ್ರೀ ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮದಿನ ಇದೇ 25ರಂದು ನಡೆಯಲಿದ್ದು, ಇದೇ ಸಂದರ್ಭದಲ್ಲಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವು ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಐದು ದಿನಗಳ ಹೊನಲುಬೆಳಕಿನ `ವಾಜಿಪೇಯಿ ಕಪ್’ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದೆ.
ಪಾಲಿಕೆ ಮಾಜಿ ಸದಸ್ಯ ಹಾಗೂ ಮಾಜಿ ಉಪ ಮೇಯರ್ ಎಸ್.ಹರೀಶ್ ಅವರ ಕನಸಿನ ಕೂಸಾಗಿರುವ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವು ಕಳೆದ ಹದಿನಾಲ್ಕು ವರ್ಷಗಳಿಂದ ವಾಜಿಪೇಯಿ ಅವರ ಜನ್ಮದಿನದಂದು ಈ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರುತ್ತಿದೆ. ಜಿಲ್ಲಾ ಮಟ್ಟ, ರಾಜ್ಯ, ರಾಷ್ಟ್ರ ಮಟ್ಟ ಸೇರಿದಂತೆ ಹಲವು ವಲಯಗಳ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಅದರಂತೆಯೇ ಈ ಬಾರಿ ರಾಜ್ಯ ಮಟ್ಟದ ಆಹ್ವಾನಿತ ಮಹಿಳೆ ಹಾಗೂ ಪುರುಷರ ತಂಡಗಳ ವಾಲಿಬಾಲ್ ಪಂದ್ಯಾವಳಿ 15ನೇ ವಾಜಿಪೇಯಿ ಕಪ್ ಆಯೋಜಿಸಿದ್ದಾರೆ.
ಉದ್ಘಾಟನೆ ಮಾಡಿ ಮಾತನಾಡಿದ ಮೇಯರ್ ಜಿ.ಪದ್ಮಾವತಿ ಅವರು, ವಾಲಿಬಾಲ್ ದೇಸಿಯಾ ಕ್ರೀಡೆಯಾಗಿದ್ದು, ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕಿದೆ. ರಾಜ್ಯದಲ್ಲಿ ಇಂಥ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸುತ್ತಿರುವ ಪಂದ್ಯಾವಳಿಗಳು ಸಹಾಯವಾಗಲಿವೆ. ಮಹಿಳಾ ತಂಡಗಳು ಭಾಗವಹಿಸಿರುವುದರಿಂದ ಸಮಾನತೆ ಹಾಗೂ ಮಹಿಳೆಯರ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.
ರಾಜಾಜಿನಗರ, ಶಂಕರಮಠ ವೃತ್ತದ ಬಳಿಯ ವಿವೇಕಾನಂದ ಆಟದ ಮೈದಾನದಲ್ಲಿ ಡಿ.25ರವರೆಗೆ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಎಂಟು ಪುರುಷರ ಹಾಗೂ ನಾಲ್ಕು ಮಹಿಳಾ ತಂಡಗಳು ಭಾಗವಹಿಸಿವೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು ನಮ್ಮ ಮುಖ್ಯ ಉದ್ದೇಶ. ರಾಜ್ಯದಾದ್ಯಂತ ಬಂದಿರುವ ಕ್ರೀಡಾಪಟುಗಳು ಕ್ರೀಡಾಭಿಮಾನಿಗಳನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ. ಇದು 15ನೇ ವರ್ಷದ ವಾಜಪೇಯಿ ಕಪ್’ ಎಂದು ಎಸ್.ಹರೀಶ್ ಹೇಳುತ್ತಾರೆ.
4ರಿಂದ 5 ಸಾವಿರ ಜನಸಂಖ್ಯೆ ಸೇರುವ ಈ ಪಂದ್ಯಾವಳಿ ವೀಕ್ಷಿಸಲು ಬರುವವರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸುಲಭವಾಗಿ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಪಂದ್ಯಾವಳಿ ವೀಕ್ಷಿಸಲು ಯಾವುದೇ ಶುಲ್ಕವಿಲ್ಲ. ಉಚಿತವಾಗಿ ಬೆಂಗಳೂರಿನ ಜನತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಈ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕ ವಾಲಿಬಾಲ್ ಒಕ್ಕೂಟದ ಅಧ್ಯಕ್ಷ ಡಾ.ಬೆಟ್ಟೇಗೌಡ ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಡಿ.21ರಿಂದ ಆರಂಭವಾಗುತ್ತಿರುವ ಬೆಂಗಳೂರಿಗರಿನ ಬಹು ನಿರೀಕ್ಷಿತ ವಾಜಿಪೇಯಿ ಕಪ್ ಈ ಬಾರಿ ಕುತೂಹಲ ಮೂಡಿಸಿದೆ.
ಹೆಚ್ಚಿನ ಮಾಹಿತಿಗೆ ಸಂರ್ಪಕಿಸಿ:
ಎಸ್.ಹರೀಶ್
ಪಾಲಿಕೆ ಮಾಜಿ ಸದಸ್ಯ ಹಾಗೂ ಮಾಜಿ ಉಪಮಹಾಪೌರರು.ಬಿಬಿಎಂಪಿ
ದೂ: 9901154205