ಬೆಂಗಳೂರು: ಸಾವಿರ ಮತ್ತು ಐನೂರು ನೋಟು ಅಮಾನ್ಯದ ಬಳಿಕ ಕಪ್ಪು ಹಣ ಬಿಳಿಮಾಡುವ ದಂಧೆಯಲ್ಲಿ ಸಿಕ್ಕಿ ಬಿದ್ದಿರುವ ಮತ್ತು ಕಾರು ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕ್ಕೊಳಗಾಗಿರುವ ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಎಲ್.ಭೀಮಾ ನಾಯಕ್ ಹಾಗೂ ಆತನ ಕಾರು ಚಾಲಕ ಮಹಮದ್ಗೆ ಮದ್ದೂರು ಜೆಎಂಎಫ್ಸಿ ನ್ಯಾಯಾಲಯ ಜನವರಿ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಪ್ಪುಹಣವನ್ನು ಬಿಳಿ ಮಾಡಿದ್ದ ಪ್ರಕರಣ ಮತ್ತು ಚಾಲಕನ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಸಿಐಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿತ್ತು ಇದೀಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕಾಗಿರುವುದರಿಂದ ಶುಕ್ರವಾರ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ.ಪ್ರಕಾಶ್ ಅವರ ಎದುರು ಪೊಲೀಸರು ಹಾಜರುಪಡಿಸಿದ್ದರು. ಈ ಸಂಬಂಧ ನಡೆದ ವಿಚಾರಣೆ ಆಲಿಸಿದ ನ್ಯಾಯಾಧೀಶ ಪ್ರಕಾಶ್ ಅವರು ವಿಚಾರಣೆಯನ್ನು ಕಾಯ್ದಿರಿಸಿ ಆರೋಪಿಗಳನ್ನು 13 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.
ಇದೆಲ್ಲದರ ನಡುವೆ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿಚಾರಣೆಗಾಗಿ ತಮಗೆ ಅರೋಪಿಗಳನ್ನು ಒಪ್ಪಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಬಹುದೆಂಬ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಮಂಡ್ಯ ಡಿವೈಎಸ್ಪಿ ವಜೀದ್ ಆಲಿಖಾನ್ ಅವರ ನೇತೃತ್ವದಲ್ಲಿ ಪೊಲೀಸರು ಭೀಮಾ ನಾಯಕ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ನ್ಯಾಯಾಲಯದ ಬಳಿ ಬಂದಿದ್ದರು. ಆದರೆ, ನ್ಯಾಯಾಧೀಶರು ಭೀಮಾನಾಯಕ್ ಮತ್ತು ಮಹಮದ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಹಿಂತಿರುಗಿದ್ದಾರೆ.
ಜನವರಿ 4ರಂದು ಮತ್ತೆ ವಿಚಾರಣೆ ನಡೆಯಲಿರುವುದರಿಂದ ಅದರೊಳಗೆ ಜಾಮೀನಿಗಾಗಿ ಭೀಮಾ ನಾಯಕ್ ಪರ ವಕೀಲರು ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.