ಬೆಂಗಳೂರು: ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ವಿಶ್ವದಾದ್ಯಂತ ಎಲ್ಲರೂ ಆತುರದಿಂದ ಕಾಯುತ್ತಿದ್ದು, ಆದರೆ ಕೇಂದ್ರಸರ್ಕಾರದ ನೋಟ್ ಬ್ಯಾನ್ ನಿಂದ ಈ ಬಾರಿಯ ಹೊಸ ವರ್ಷ ಭಾಗಶಃ ಕ್ಯಾಶ್ ಲೆಸ್ ಆಗಿದ್ದು, ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಜನರು ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾಗಿದ್ದಾರೆ.
ಎಲ್ಲಾ ಪಬ್, ಬಾರ್, ಫೈವ್ಸ್ಟಾರ್ ಹೊಟೇಲ್, ಕ್ಲಬ್, ರೆಸ್ಟೋರೆಂಟ್ ಗಳು ಈಗಾಗಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧಗೊಂಡಿದೆ. ಬುಕ್ಕಿಂಗ್ ಕೂಡ ಈಗಾಗಲೇ ಮುಗಿದಿದ್ದು, ಬಹುತೇಕ ಬುಕ್ಕಿಂಗ್ಗಳು ಕ್ಯಾಶ್ಲೆಸ್ ಆಗಿದೆ.
ಈ ಬಾರಿಯ ಹೊಸ ವರ್ಷ ಕ್ಯಾಶ್ ಲೆಸ್ ವ್ಯವಸ್ಥೆಗೆ ನಾಂದಿ ಹಾಡುವಂತಿದ್ದು, ಅಡ್ವಾನ್ಸ್ ಬುಕ್ಕಿಂಗ್ ಹೊರತುಪಡಿಸಿದಂತೆ ಹಲವೆಡೆ ಪಬ್-ಬಾರ್ಗಳಲ್ಲಿ ಬಿಲ್ ಪೇ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಲ್ಲರೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಬಹುತೇಕ ಬಾರ್, ಪಬ್ಗಳಲ್ಲಿ ಸ್ವೈಪಿಂಗ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಸಿಲಿಕಾನ್ ಸಿಟಿಯ ಜನರ ಸಂಭ್ರಮಾಚರಣೆಗೆ ನೋಟ್ ಬ್ಯಾನ್ ನಿಂದ ಯಾವುದೇ ಅಡ್ಡಿ ಇಲ್ಲ ಎನ್ನಬಹುದು.