ಮೈಸೂರು: ರಾಜ್ಯ ಸಹಕಾರ ಮತ್ತು ಸಕ್ಕರೆ ಸಚಿವ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದ ಹೆಚ್.ಎಸ್.ಮಹದೇವಪ್ರಸಾದ್(58) ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ಚಿಕ್ಕಮಗಳೂರಿನಲ್ಲಿ ಸ್ವರ್ಗಸ್ಥರಾಗಿದ್ದಾರೆ. ಪತ್ನಿ ಡಾ. ಗೀತಾ, ಪುತ್ರ ಗಣೇಶ್ ಪ್ರಸಾದ್, ಸೊಸೆ, ಮೊಮ್ಮಕ್ಕಳು, ಸಂಬಂಧಿಕರು, ಆತ್ಮೀಯರು, ಬೆಂಬಲಿಗರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತವರು ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯ ಹಾಲನಹಳ್ಳಿಯಲ್ಲಿ ಬುಧವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಕಾರ್ಯಕ್ರಮ ನಿಮಿತ್ತ ಅವರು ಚಿಕ್ಕಮಗಳೂರಿಗೆ ಸೋಮವಾರ ರಾತ್ರಿ ಬೆಂಗಳೂರಿನಿಂದ ತೆರಳಿದ್ದರಲ್ಲದೆ, ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಅದಕ್ಕೂ ಮುನ್ನ ಆತ್ಮೀಯರೊಂದಿಗೆ ಬೆರೆತು ಊಟ ಮಾಡಿ ರಾತ್ರಿ ಮಲಗಿದ್ದರು. ಸಾಮಾನ್ಯವಾಗಿ ಬೆಳಿಗ್ಗೆ 6ಗಂಟೆಗೆ ಎದ್ದು ವಾಕಿಂಗ್ ಮಾಡುವುದು ಅವರ ಅಭ್ಯಾಸವಾಗಿತ್ತು. ಆದರೆ ಇವತ್ತು ಅವರು ತಮ್ಮ ಕೊಠಡಿಯಿಂದ ಹೊರಬಂದಿರಲಿಲ್ಲ. 7.30 ಆದರೂ ಕೊಠಡಿಯ ಬಾಗಿಲು ತೆರೆಯಲಿಲ್ಲ. ಅವರ ಕೊಠಡಿಯ ಬಾಗಿಲು ತಟ್ಟಿ ಎಬ್ಬಿಸುವ ಪ್ರಯತ್ನವನ್ನು ಸಿಬ್ಬಂದಿ ಮಾಡಿದ್ದರು. ಆದರೆ ಒಳಗಿನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಅವರ ಮೊಬೈಲ್ ಗೆ ಕರೆ ಮಾಡಿದರೂ ಅದನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನ ಬಂದಿತ್ತು. ಸುಮಾರು 8.45ರ ವೇಳೆಗೆ ತೆರಳಿದ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ್ ಅವರು ರೆಸಾರ್ಟ್ ನ ಸಿಬ್ಬಂದಿಯಿಂದ ನಕಲಿ ಕೀ ಪಡೆದು ಬಾಗಿಲು ತೆರೆದು ನೋಡಿದಾಗ ಅವರು ನಿಸ್ತೇಜವಾಗಿ ಮಲಗಿದ್ದರು. ತಕ್ಷಣ ವೈದ್ಯರನ್ನು ಕರೆಯಿಸಿ ಪರೀಕ್ಷೆ ಮಾಡಿಸಿದಾಗ ಅವರು ಮೃತಪಟ್ಟಿರುವುದು ದೃಢವಾಗಿದೆ.
ಚಿಕ್ಕಮಗಳೂರಿನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಸೋಮವಾರ ರಾತ್ರಿಯೇ ತೆರಳಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸೋಮವಾರ ಚಾಮರಾಜನಗರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಬೆಂಗಳೂರಿಗೆ ತೆರಳಿದ್ದರು. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದ್ದ ಅವರು ಮೂಲತಃ ಮೈಸೂರಿನ ಕೆ.ಆರ್.ನಗರ ತಾಲೂಕಿನವರಾಗಿದ್ದರೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ನೆಲೆಸಿದ್ದರು. 1994ರಲ್ಲಿ ಪ್ರಥಮಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು ಸುಮಾರು 5 ಬಾರಿ ಗೆಲುವು ಕಂಡಿದ್ದಾರೆ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಜನತಾದಳದಲ್ಲಿ ರಾಜಕೀಯ ಬದುಕು ಕಂಡುಕೊಂಡಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದರು. ಜನತಾದಳದಿಂದ ಕಾಂಗ್ರೆಸ್ಗೆ ಬಂದಿದ್ದ ಅವರು ಇತ್ತೀಚೆಗಿನ ವರ್ಷಗಳಲ್ಲಿ ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದರು. ಸಚಿವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಹಳೆ ಮೈಸೂರು ಭಾಗದಲ್ಲಿ ದುಃಖ ಮಡುಗಟ್ಟಿದ್ದು, ಅವರ ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ಪತ್ನಿ, ಮಗ ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಎಲ್ಲೆಡೆಯಿಂದ ಅವರ ಅಭಿಮಾನಿಗಳು ನಿವಾಸದತ್ತ ಆಗಮಿಸುತ್ತಿದ್ದಾರೆ. ಹಲವೆಡೆ ಭಾವಚಿತ್ರವುಳ್ಳ ಫೆಕ್ಸ್ಗಳನ್ನು ಹಾಕಿ ಅಭಿಮಾನಿಗಳು ಬೆಂಬಲಿಗರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಸಚಿವರ ಕುವೆಂಪುನಗರದ ನಿವಾಸದಲ್ಲಿ ಪತ್ನಿ, ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು ಮನೆ ಮುಂದೆ ಜಮಾಯಿಸಿದ್ದಾರೆ. ಎಲ್ಲೆಲ್ಲೂ ಶೋಕ ಮಡುಗಟ್ಟಿದೆ. ಸೂತಕ ಛಾಯೆ ಆವರಿಸಿದೆ. ಕುವೆಂಪು ನಗರದ ಅವರ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಗುಂಡ್ಲುಪೇಟೆಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನಿವಾಸಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್ ಜಗದೀಶ್ ಅವರಿಗೆ ಸೂಕ್ತಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದರು. ಸ್ಥಳದಲ್ಲಿ ಹುಣಸೂರು, ಪಿರಿಯಾಪಟ್ಟಣ ಶಾಸಕರು ಆಗಮಿಸಿದ್ದಾರೆ. ಪಾಲಿಕೆಯ ಸದಸ್ಯರು ಸಹ ಆಗಮಿಸಿದ್ದಾರೆ. ಮಾಧ್ಯಮಗಳಿಗೆ ಅವರ ಮಗ ಗಣೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿ ಮಧ್ಯಾಹ್ನ 3 ರಿಂದ ಸಂಜೆ 5ಗಂಟೆಯವರೆಗೆ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಗುಂಡ್ಲುಪೇಟೆಗೆ ಕೊಂಡೊಯ್ದು ಅಲ್ಲಿ ರಾತ್ರಿ 11ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಇರಿಸಲಾಗುವುದು. ಅಲ್ಲಿಂದ ಹಾಲಹಳ್ಳಿಗೆ ಕೊಂಡೊಯ್ದು ಬುಧವಾರ ಬೆಳಿಗ್ಗೆ 11ಗಂಟೆಯವರೆಗೆ ಸಾರ್ವಜನಿಕರ ದರ್ಶಕ್ಕೆ ಇರಿಸಲಾಗುತ್ತಿದ್ದು, ಬಳಿಕ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದರು.
ಗುಂಡ್ಲುಪೇಟೆಯ ಶಾಸಕರಾಗಿದ್ದ ಮಹದೇವಪ್ರಸಾದ್ ಹಾಲಹಳ್ಳಿ ಶ್ರೀಕಾಂತ ಶೆಟ್ಟಿ ಮಹದೇವಪ್ರಸಾದ್ 1958ರ ಅಗಸ್ಟ್ 8ರಂದು ಗುಂಡ್ಲುಪೇಟೆಯಲ್ಲಿ ಜನಿಸಿದ್ದರು. ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಸಂಗಮ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಇವರು ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಉದ್ಯೋಗಮೇಳಗಳನ್ನು ಆಯೋಜಿಸಿ ಗುರುತಿಸಿಕೊಂಡಿದ್ದರು.