ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯೋರ್ವಳನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಸ್ತೆಯಲ್ಲೇ ಅಡ್ಡಗಟ್ಟಿ ಆಕೆಯನ್ನು ಮನಸೋ ಇಚ್ಛೆ ಎಳೆದಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ಜನವರಿ 1ರಂದು ನಡೆದಿದೆ.
ಹೊಸ ವರ್ಷಾಚರಣೆಯಂದೇ ಉವತಿಯ ಮನೆಯ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಯುವತಿ ಮನೆ ಬಳಿ ಇರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದೀಗ ದೇಶವ್ಯಾಪಿ ಈ ಸುದ್ದಿ ತೀವ್ರ ಚರ್ಚೆಗೀಡಾಗುತ್ತಿದೆ. ಬೆಂಗಳೂರಿನ ಕಮ್ಮನಹಳ್ಳಿಯ 5ನೇ ಮುಖ್ಯರಸ್ತೆಯಲ್ಲಿ ಜನವರಿ 1 ರಂದು ಬೆಳಗಿನ ಜಾವ ಸುಮಾರು 2.30 ರ ವೇಳೆಗೆ ಈ ಘಟನೆ ನಡೆದಿದ್ದು, ಆಟೋದಲ್ಲಿ ಬಂದಿಳಿದ ಯುವತಿಯನ್ನು ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಒಬ್ಟಾತ ಸ್ಕೂಟರ್ನಿಂದ ಇಳಿದು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಆಕೆಯನ್ನು ತಬ್ಬಿ ಮುದ್ದಾಡಿ ಚುಂಬಿಸಿದ್ದಾನೆ. ಯುವತಿಯನ್ನು ಎಳೆದೊಯ್ದು ಸ್ಕೂಟರ್ನಲ್ಲಿ ಕೂರಿಸಲು ಯತ್ನಿಸಿದ್ದಾನೆ, ಪ್ರತಿರೋಧ ತೋರಿದಾಗ ಆಕೆಯನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಈ ಘಟನೆ ನಡೆಯುತ್ತಿದ್ದಾಗ ಅದೇ ರಸ್ತೆಯಲ್ಲಿ ಸುಮಾರು 50 ಮೀಟರ್ ದೂರದಲ್ಲಿ ನಾಲ್ಕೈದು ಜನ ನಿಂತು ಘಟನೆಯನ್ನು ನೋಡುತ್ತಿದ್ದರೇ ಹೊರತು ಯಾರೊಬ್ಬರೂ ಯುವತಿಯ ನೆರವಿಗೆ ಧಾವಿಸಿ ಬರಲಿಲ್ಲ.
ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಸುಮೋಟೋ ದೂರು ದಾಖಲಾಗಿದೆ. ಯುವತಿಯ ಹೇಳಿಕೆ ಪಡೆದುಕೊಂಡು ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.