ಬೆಂಗಳೂರು: ಖಾಲಿ ಉಳಿದಿದ್ದ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ರಾಜ್ಯಪಾಲ ವಾಜುಭಾಯಿವಾಲ ಅವರಿಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಸೋಮವಾರ ನಿರ್ಧರಿಸಿದೆ.
ಇಂದು ಇಂದು ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ನ್ಯಾ. ಭಾಸ್ಕರ್ರಾವ್ ರಾಜೀನಾಮೆ ಬಳಿಕ ಕಳೆದ 13 ತಿಂಗಳಿಂದ ಖಾಲಿ ಇರುವ ಲೋಕಾಯುಕ್ತ ಹುದ್ದೆಗೆ ಮೊದಲು ನ್ಯಾ. ವಿಕ್ರಂಜಿತ್ಸೇನ್ ಹೆಸರು ಕೇಳಿ ಬಂದಿತ್ತು. ಆದರೆ, ಸ್ವತಃ ಸೇನ್ ಅವರೇ ಹುದ್ದೆಯನ್ನು ನಿರಾಕರಿಸಿದ್ದರು. ಬಳಿಕ ಕನ್ನಡಿಗರಾದ ಛತ್ತೀಸ್ಗಢ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ, ನ್ಯಾ. ನಾಯಕ್ ವಿರುದ್ಧ ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಸಿ ನಿವೇಶನ ಪಡೆದುಕೊಂಡ ಆರೋಪ ಕೇಳಿ ಬಂದಿದ್ದರಿಂದ ಹಾಗೂ ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ರಾಜ್ಯಪಾಲರು ಎರಡು ಬಾರಿ ಅವರ ಹೆಸರಿನ ಶಿಫಾರಸನ್ನು ವಾಪಸ್ ಕಳಿಸಿದ್ದರು.
ಮುಂದಿನ ಲೋಕಾಯುಕ್ತ ಹುದ್ದೆಗೆ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.