ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕ್ರಾಂಗ್ರೆಸ್ ಸಮಿತಿಯ ಕಾನೂನು ಘಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಬುಧವಾರ ದೂರು ನೀಡಿದೆ.
ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರುಪಾಯಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ನಡುವಿನ ಸಂಭಾಷಣೆ ಕುರಿತು ಕೆಪಿಸಿಸಿ ಕಾನೂನು ಘಟಕ ಎಸಿಬಿಗೆ ದೂರು ನೀಡಿದ್ದು, ಈ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ನಡೆದ ಸಂಭಾಷಣೆಯ ಪ್ರಕಾರ, ತಾವು ಲಂಚರೂಪದಲ್ಲಿ ಬಿಜೆಪಿ ಹೈಕಮಾಂಡ್ಗೆ ಹಣ ನೀಡಿರುವುದನ್ನು ಒಪ್ಪಿಕೊಂಡಿದ್ದು, ಆ ಇಬ್ಬರು ನಾಯಕರು ಈ ಕೂಡಲೇ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು ಮತ್ತು ಸರ್ಕಾರ ಬಿಜೆಪಿ ಕಚೇರಿಯನ್ನು ಮುಟ್ಟುಗೋಲು ಹಾಕಬೇಕು. ಒಂದು ವೇಳೆ ಅವರು ರಾಜಿನಾಮೆ ನೀಡದೇ ಹೋದಲ್ಲಿ ಅವರ ಮುಖವಾಡವನ್ನು ಜನತಾ ನ್ಯಾಯಾಲಯದಲ್ಲಿ ಕಳಚಲಾಗುವುದು ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ಧನಂಜಯ್ ಹೇಳಿದ್ದಾರೆ.