ಬೆಂಗಳೂರು: ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ವತಿಯಿಂದ ಫೆಬ್ರುವರಿ 28 ರಂದು ‘ಬ್ಯಾಂಕಿಂಗ್ ವಲಯದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ಎಚ್.ವಿ.ರೈ ಹೇಳಿದ್ದಾರೆ.
ರಾಷ್ಟ್ರೀಕೃತ, ಸಹಕಾರಿ ಹಾಗೂ ಗ್ರಾಮೀಣ ಬ್ಯಾಂಕುಗಳ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಈ ವೇದಿಕೆಯು ದೇಶದಾದ್ಯಂತ 10 ಲಕ್ಷ ಸದಸ್ಯರನ್ನು ಒಳಗೊಂಡಿದ್ದು, ಸಿಬ್ಬಂದಿಯ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸಲಿದೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ಬ್ಯಾಂಕ್ ಸಂಘವು ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದ್ದು, ಈ ಹಿನ್ನೆಲೆ ದೇಶದಾದ್ಯಂತ 7.5 ಲಕ್ಷ ಬ್ಯಾಂಕಿಂಗ್ ಪಿಂಚಣಿದಾರರಿಗೆ ಸಮಸ್ಯೆ ಉಂಟಾಗಿದೆ. ಮಾತ್ರವಲ್ಲ ಬ್ಯಾಂಕುಗಳ ಕಾರ್ಯ ಚಟುವಟಿಕೆಗಳು ಕೇಂದ್ರ ಸರ್ಕಾರದ ನೋಟು ರದ್ದತಿಯಿಂದ ಬಾಕಿ ಉಳಿದಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಇದುವರೆಗೂ ನೇಮಕ ಮಾಡಿಲ್ಲ’ ಎಂದು ಹೇಳಿದರು.