ಬೆಂಗಳೂರು: ಬಹಳಷ್ಟು ಸಂದರ್ಭಗಳಲ್ಲಿ ಹೆಣಗಳನ್ನು ಸಾಗಿಸುವುದೇ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದನ್ನು ತಡೆಗಟ್ಟುವ ಮತ್ತು ಬಡವರಿಗೆ ಅನುಕೂಲವಾಗುವಂತೆ ಸರ್ಕಾರ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಗೆ ಶ್ರದ್ಧಾಂಜಲಿ ಯೋಜನೆ ಮೂಲಕ ಶ್ರದ್ಧಾಂಜಲಿ ರಥ ನೀಡಲು ಮುಂದೆ ಬಂದಿದ್ದು ಈ ಯೋಜನೆಗೆ ಈಗಾಗಲೇ ಚಾಲನೆಯೂ ದೊರೆತಿದೆ.
ಈ ಯೋಜನೆಯಿಂದಾಗಿ ಬಡವರು ಸರ್ಕಾರಿ ಆಸ್ಪತ್ರೆಗಳಿಂದ ಮತ್ತು ಸಾರ್ವಜನಿಕ ಸ್ಥಳಗಳಿಂದ ಮನೆಗಳಿಗೆ ಶವಗಳನ್ನು ಸಾಗಿಸಲು ಅನುಕೂಲವಾಗಲಿದ್ದು, ಸಾಗಾಟ ಉಚಿತವಾಗಿರಲಿದೆ. ಈಗಾಗಲೇ ಹಲವೆಡೆ ಶವಗಳನ್ನು ಸಾಗಿಸಲು ಬಡವರು ಅನುಭವಿಸಿದ ಕಣ್ಣೀರಿನ ಕತೆಗಳು ಬೇಕಾದಷ್ಟಿವೆ. ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಶವ ಸಾಗಿಸಿದ ಘಟನೆಗಳು ಹಸಿರಾಗಿವೆ. ಇಂತಹ ಘಟನೆಗಳು ಮರುಕಳಿಸಬಾರದು ಅಷ್ಟೇ ಅಲ್ಲ ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರ ಇದೀಗ ಶ್ರದ್ಧಾಂಜಲಿ ರಥದ ಯೋಜನೆ ಜಾರಿಗೆ ತಂದಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ `ತುರ್ತು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ’ ರೂಪಿಸಿರುವ ಈ ಯೋಜನೆ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನಿಯಂತ್ರಣದಲ್ಲಿ ಇರಲಿದೆ. ಸರ್ಕಾರ ಈ ಯೋಜನೆಗಾಗಿ ಹೊಸ ವಾಹನಗಳನ್ನು ಖರೀದಿಸದೆ ಹಳೆಯ 108 ತುರ್ತು ಚಿಕಿತ್ಸಾ ವಾಹನಗಳನ್ನೇ ಬಳಸಿಕೊಳ್ಳಲು ತೀರ್ಮಾನಿಸಿದೆ.
ವಾಹನಕ್ಕೆ ಸ್ಟ್ರೆಚ್ಚರ್ ಸೇರಿದಂತ ಅಗತ್ಯ ಉಪಕರಣಗಳನ್ನು ಅಳವಡಿಸಿ, ಜತೆಗೊಬ್ಬ ಸಹಾಯಕನನ್ನು ನೇಮಿಸಲಾಗುತ್ತದೆ. ಈ ಶ್ರದ್ಧಾಂಜಲಿ ವಾಹನಗಳನ್ನು ಜಿಲ್ಲಾ ಆಸ್ಪತ್ರೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಕಚೇರಿ ಬಳಿ ನಿಲ್ಲುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಒಂದು ವೇಳೆ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳು ಮೃತಪಟ್ಟರೆ, ಆ ರೋಗಿಯ ಶವವನ್ನು ತಲುಪಿಸ ಬೇಕಾದ ಸ್ಥಳಕ್ಕೆ ತಲುಪಿಸುವ ಕಾರ್ಯವನ್ನು ಶ್ರದ್ಧಾಂಜಲಿ ರಥಗಳು ಮಾಡಲಿವೆ. ಇವು ಅನಾಥ ಶವಗಳ ಸಾಗಣೆಯ ಸಂದರ್ಭದಲ್ಲೂ ಉಪಯೋಗಕ್ಕೆ ಬರಲಿವೆ.
ಸದ್ಯ ಶ್ರದ್ಧಾಂಜಲಿ ರಥ ಯೋಜನೆಗೆ 108, ಆರೋಗ್ಯ ಸೇವೆಯ ಕಾಲ್ಸೆಂಟರ್ ನ ದೂರವಾಣಿ ಸೇವೆಯನ್ನೇ ಬಳಸಿಕೊಳ್ಳಬಹುದಾಗಿದೆ. ವಾಹನ ಇರುವ ಆಸ್ಪತ್ರೆಯಲ್ಲಿಯೇ ಸಾವು ಸಂಭವಿಸಿದರೆ, ನೇರ ವೈದ್ಯರೇ ಚಾಲಕನನ್ನು ಸಂಪರ್ಕಿಸಿ ಶವ ಸಾಗಿಸಲು ಅನುವು ಮಾಡಿಕೊಡಲಿದ್ದಾರೆ. ಫೆ.23ರಂದು ಜಾರಿಗೆ ಬಂದಿರುವ ಈ ಯೋಜನೆ ಯಾವ ರೀತಿಯಲ್ಲಿ ಬಡಜನರಿಗೆ ಅನುಕೂಲವಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.