ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಸಲಾಗಿದ್ದು ಜಾತಿವಾರು ಅಂಕಿ ಅಂಶಗಳು ಸೇರಿದಂತೆ ವಿವರ ಮಾಹಿತಿಗಳನ್ನೊಳಗೊಂಡ ವರದಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ವಸತಿ ಶಾಲೆಗಳು, ಹಾಸ್ಟೆಲ್ ಗಳ ಅಡುಗೆ ಕೋಣೆ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವ ಸಂಬಂಧ ಕಠಿಣವಾದ ಕಾನೂನು ತರಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಮಾತನಾಡಿದ ಸಚಿವರು, ಇತ್ತೀಚೆಗೆ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯಲ್ಲಿ ನಡೆದ ಘಟನೆಗಳು ಮತ್ತೆ ರಾಜ್ಯದಲ್ಲಿ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಈ ಕಾನೂನು ತರಲು ಚಿಂತಿಸಲಾಗಿದೆ.
ಒಳಚರಂಡಿ ಹಾಗೂ ಮ್ಯಾನ್ಹೋಲ್ ಸ್ವಚ್ಛಗೊಳಿಸುವಾಗ ಅಂಬ್ಯುಲೆನ್ಸ್, ಅಗ್ನಿಶಾಮಕದಳ ಹಾಗೂ ಇನ್ನಿತರೆ ಮುಂಜಾಗೃತ ಕ್ರಮ ಕೈಗೊಂಡು ಇಂತಹ ಕೆಲಸ ಮಾಡಬೇಕಾಗುತ್ತದೆ. ಇದು ಸರ್ಕಾರದ ಮಾರ್ಗಸೂಚಿಯೂ ಹೌದು ಎಂದು ಮಾತನಾಡಿದ ಸಮಾಜ ಕಲ್ಯಾಣ ಸಚಿವರು, ಇತ್ತೀಚೆಗೆ ಸಿ.ವಿ. ರಾಮನ್ ನಗರದಲ್ಲಿ ಮ್ಯಾನ್ಹೋಲ್ ಸ್ವಚ್ಚಗೊಳಿಸುವಾಗ ಮೂರು ಮಂದಿ ಪೌರಕಾರ್ಮಿಕರು ಮೃತಪಟ್ಟಿದ್ದಾರೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುವುದು. ನಗರ ಸಭೆಗಳು, ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಇಂತಹ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಿ.ವಿ. ರಾಮನ್ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮೃತ ಪೌರ ಕಾರ್ಮಿಕರು ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರು ಜಲಮಂಡಳಿಗೆ ಸೂಚಿಸಲಾಗಿದೆ ಎಂದ ಸಚಿವರು ಮೃತ ಕುಟುಂಬದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.