ಬೆಂಗಳೂರು: ರಾಯಚೂರಿನ ವಾಟ್ಸ್ಆಪ್ ಗ್ರೂಪ್ಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದ್ದು, ಈ ವರ್ಷವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದು, ಸೋಮವಾರ ಬೆಳಗ್ಗೆ 10.30ರ ನಂತರ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ರಾಯಚೂರಿನಲ್ಲಿ ಓಡಾಡಲು ಶುರುವಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ವಿಷಯ ತಿಳಿದ ತಕ್ಷಣ ಎಚ್ಚೆತ್ತುಕೊಂಡಿದ್ದು, ಪ್ರಶ್ನೆ ಪತ್ರಿಕೆ ಅಸಲಿಯೋ ನಕಲಿಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ರಾಯಚೂರು ಎಸ್ಪಿ ನೇತೃತ್ವದ ತಂಡ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಬೆಳಗ್ಗೆ 10.30 ರ ಬಳಿಕ ವಾಟ್ಸ್ಆಪ್ಗೆ ಬಂದಿದೆ. ಪರೀಕ್ಷೆ 10.15 ಕ್ಕೆ ಆರಂಭವಾಗಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಾಧ್ಯವಿಲ್ಲ. ಜತೆಗೆ ಪ್ರಶ್ನೆ ಪತ್ರಿಕೆ ಕೆಳಗೆ ವಿದ್ಯಾರ್ಥಿಯೊಬ್ಬರ ಹಾಲ್ ಟಿಕೆಟ್ ಇದೆ. ಯಾರೋ ವಿದ್ಯಾರ್ಥಿಗಳು ವದಂತಿ ಹಬ್ಬಿಸಲು ಹೀಗೆ ಮಾಡಿರುವ ಸಾಧ್ಯತೆ ಇದೆ. ಸೋಮವಾರ ಸಂಜೆಯೊಳಗೆ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸಿ. ಶಿಖಾ ಹೇಳಿಕೆ ತಿಳಿಸಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳುವ ಪ್ರಕಾರ ವಾಟ್ಸ್ಆಪ್ನಲ್ಲಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆ ರಾಯಚೂರಿನಲ್ಲೇ ಬಹಿರಂಗಗೊಂಡಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಜತೆಗೆ ಪರೀಕ್ಷೆ ನಂತರ ಫೋಟೋ ತೆಗೆದು ಹರಿಬಿಟ್ಟಿರುವ ಸಾಧ್ಯತೆ ಇದೆ. ನಿಜವಾದ ವಿಷಯ ತನಿಖೆ ಪೂರ್ಣಗೊಂಡ ನಂತರ ತಿಳಿಯಲಿದೆ ಎಂದಿದ್ದಾರೆ.