ಬೆಂಗಳೂರು: 2017-18ನೇ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿರುವುದಾಗಿ ಹೇಳಿರುದಾಗಿ ಹೇಳಿದ್ದಾರೆ. ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ., ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಐದು ವರ್ಷಗಳಲ್ಲಿ ನೀರಾವರಿಗೆ 50,000 ಕೋಟಿ ರೂ. ಅನುದಾನವನ್ನು ವೆಚ್ಚ ಮಾಡುವುದಾಗಿ ಭರವಸೆ ನೀಡಿದ್ದೆವು. ಇದೀಗ 2017-18 ನೇ ಸಾಲಿನ ಆಯವ್ಯಯವನ್ನೂ ಒಳಗೊಂಡಂತೆ ನೀರಾವರಿಗೆ ಮಾತ್ರವಲ್ಲ, ಭಾರೀ ಮತ್ತು ಮಧ್ಯಮ ನೀರಾವರಿ ಕ್ಷೇತ್ರಕ್ಕೆ 54,893 ಕೋಟಿ ರೂ. ವೆಚ್ಚ ಮಾಡಲಾಗುವುದು. ಹಿಂದಿನ ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಈ ಬಾಬ್ತಿಗೆ 21,125 ಕೋಟಿ ರೂ. ವೆಚ್ಚ ಮಾಡಿತ್ತು. ತಮ್ಮ ಸರ್ಕಾರ 33,771 ಕೋಟಿ ರೂ. ಅಧಿಕ ಮೊತ್ತವನ್ನು ವೆಚ್ಚ ಮಾಡುತ್ತಿದೆ.
ತಮ್ಮ ಸರ್ಕಾರದ ಅಧಿಕಾರಾವಧಿ ಪೂರ್ಣಗೊಳ್ಳುವ ವೇಳೆಗೆ ಒಟ್ಟಾರೆ ನೀರಾವರಿ ಕ್ಷೇತ್ರಕ್ಕೆ 62,000 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. ಇದು ನುಡಿದಂತೆ ನಡೆದಿದ್ದೇವೆ ಎಂಬ ತಮ್ಮ ಸರ್ಕಾರದ ಧ್ಯೇಯ ವಾಕ್ಯದ ಅಕ್ಷರಶಃ ಪಾಲಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೃಷಿ, ತೋಟಗಾರಿಕೆ, ನೀರಾವರಿ, ಶಿಕ್ಷಣ, ಆರೋಗ್ಯ, ವಿದ್ಯುತ್, ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರಗಳಿಗೆ ನೀಡಿರುವ ಆಧ್ಯತೆಯನ್ನು ಮುಂದುವರೆಸಿದ್ದು, 2017-18 ನೇ ಸಾಲಿನ ಬಜೆಟ್ ಉತ್ತಮ ಹಾಗೂ ಬೆಳವಣಿಗೆಗೆ ಪೂರಕ ಎಂದು ಹೇಳಿದ್ದಾರೆ.
2017-18 ನೇ ಸಾಲಿನ ಆಯವ್ಯಯದ ಗಾತ್ರ 1,86,561 ಕೋಟಿ ರೂ. ಆಗಿದ್ದು, 2016-17 ನೇ ಸಾಲಿನ ಆಯವ್ಯಯ ಗಾತ್ರ 1,63,419 ಕೋಟಿ ರೂ. ಆಗಿತ್ತು. ಒಟ್ಟಾರೆ ಆಯವ್ಯಯ ಗಾತ್ರದಲ್ಲಿ ಶೇಕಡಾ 14.16 ಹೆಚ್ಚಳ ಅಥವಾ ಬೆಳವಣಿಗೆಯನ್ನು ಕಾಣಬಹುದು. ಅಂತೆಯೇ, ಬಂಡವಾಳ ವೆಚ್ಚದಲ್ಲಿ ಶೇಕಡಾ 16 ಹಾಗೂ ಸಂಪತ್ತು ಸೃಷ್ಠಿಯಲ್ಲಿ ಶೇ. 18ರ ಬೆಳವಣಿಗೆಯಾಗಿದೆ. ಮುದ್ರಾಂಕ ಹಾಗೂ ನೋಂದಣಿಯನ್ನು ಹೊರತುಪಡಿಸಿದಲ್ಲಿ ಉಳಿದೆಲ್ಲಾ ತೆರಿಗೆಗಳ ಸಂಗ್ರಹಣಾ ಬಾಬ್ತುಗಳಲ್ಲೂ ನಿಗಧಿತ ಗುರಿ ಸಾಧನೆ ಆಗಿದೆ. ಆದರೆ, ಅಪನಗಧೀಕರಣದ ಹಿನ್ನೆಲೆಯಲ್ಲಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ಬಾಬ್ತಿನಲ್ಲಿ ನಿರೀಕ್ಷಿತ ಪ್ರಗತಿಯಾಗದೆ ಶೇ. 25 ರಷ್ಟು ಕೊರತೆ ಅಂದರೆ 1350 ಕೋಟಿ ರೂ. ತೆರಿಗೆ ಸಂಗ್ರಹಣೆ ಆಗಿದೆ. ಕೃಷಿ ಮತ್ತು ತೋಟಗಾರಿಕಾ ಅನುದಾನದಲ್ಲಿ ಪ್ರಸಕ್ತ ಸಾಲಿನಲ್ಲಿ 12,696 ಕೋಟಿ ರೂ. ಇದ್ದು, ಮುಂಬರುವ ಸಾಲಿನಲ್ಲಿ ಇದಕ್ಕೆ ಮೀಸಲಿರಿಸಿರುವ ಅನುದಾನದ ಮೊತ್ತ 15,929 ಕೋಟಿ ರೂ. ಆಗಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಹಂಚಿಕೆಯಲ್ಲಿ 3,233 ಕೋಟಿ ರೂ. ಹೆಚ್ಚಳವಾಗಿರುವ ಬಗ್ಗೆ ತಿಳಿಸಿದ್ದಾರೆ.
ಅನ್ನಭಾಗ್ಯ ಫಲಾನುಭವಿಗಳಿಗೆ ಪ್ರತಿ ಘಟಕಕ್ಕೆ ಎರಡು ಕೆ. ಜಿ ಹೆಚ್ಚುವರಿ ಆಹಾರ ಧಾನ್ಯವನ್ನು ಉಚಿತವಾಗಿ ನೀಡುವುದು, ಕ್ಷೀರಭಾಗ್ಯ ಯೋಜನೆಯಡಿ ವಾರಕ್ಕೆ ಮೂರು ದಿನಗಳ ಬದಲಾಗಿ ಐದು ದಿನಗಳು ಮಕ್ಕಳಿಗೆ ಕುಡಿಯಲು ಹಾಲು ಕೊಡುವುದು, ಅಂಗನವಾಡಿ ಮಕ್ಕಳಿಗೆ ವಾರಕ್ಕೆ ಐದು ದಿನಗಳು ಕುಡಿಯಲು ಹಾಲು ಕೊಡುವ ಜೊತೆಗೆ ವಾರಕ್ಕೆ ಎರಡು ಬಾರಿ ತಿನ್ನಲು ಮೊಟ್ಟೆ ನೀಡುವುದು ಇವೆಲ್ಲವೂ ಹಸಿವು ಮುಕ್ತ ಕರ್ನಾಟಕದ ಕನಸನ್ನು ಸಾಕಾರ ಮಾಡುವುದರ ಜೊತೆಗೆ ಅಪೌಷ್ಠಿಕತೆಯನ್ನು ತೊಡೆದು ಹಾಕಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ. ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪೂರ್ವ, ಪದವಿ, ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಿ ಅವರ ವ್ಯಾಸಂಗಕ್ಕೆ ಪುಷ್ಠಿ ನೀಡುವ ಹಾಗೂ 12 ಲಕ್ಷ ಗರ್ಭೀಣಿಯರಿಗೆ ಬಿಸಿಯೂಟ ಕೊಡುವ ಮಾತೃಪೂರ್ಣ ಹೊಸ ಯೋಜನೆಗಳು ಈ ಬಜೆಟ್ನ ಹೊಸ ಸೇರ್ಪಡೆಗಳಾಗಿವೆ.
ವಸತಿಗೆ ಮತ್ತಷ್ಟು ಒತ್ತು, ನಿವೇಶನ ಹೊಂದಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರು ಅರ್ಜಿ ಹಾಕಿದಲ್ಲಿ ಮನೆ ಮಂಜೂರು, ಆರು ಹೊಸ ವೈದ್ಯಕೀಯ ಮಹಾ ವಿದ್ಯಾಲಯಗಳ ಪ್ರಾರಂಭಕ್ಕೆ ಚಾಲನೆ, ಐದು ಜಿಲ್ಲಾ ಆಸ್ಪತ್ರೆಗಳನ್ನು ಜಿಲ್ಲಾ ಸ್ಪೆಷಲ್ ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಕೆ ಹಾಗೂ 49 ಹೊಸ ತಾಲ್ಲೂಕುಗಳ ರಚನೆ ಈ ಬಜೆಟ್ನ ಹೊಸ ಆಶಯಗಳಾಗಿದೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಬಗ್ಗೆ ಹರಿಹಾಯ್ದ ಅವರು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲದ ಕನಿಷ್ಠ ಅರ್ಧದಷ್ಟು ಭಾಗವನ್ನು ಮನ್ನಾ ಮಾಡಿದಲ್ಲಿ ತಮ್ಮ ಸಕರ್ಾರವೂ ಕೂಡಾ ಉಳಿದ ಅರ್ಧ ಭಾಗವನ್ನು ಮನ್ನಾ ಮಾಡಲು ಮುಂದಾಗಲಿದೆ. ಪ್ರತಿ ಪಕ್ಷದ ಮುಖಂಡರು ಕೃಷಿ ಸಾಲದ ಮನ್ನಾ ಕುರಿತಂತೆ ಅನಗತ್ಯ ಹೇಳಿಕೆಗಳನ್ನು ನೀಡಿ ಮೊಸಳೆ ಕಣ್ಣೀರು ಸುರಿಸುವ ಬದಲು ರಾಜ್ಯ ಸರ್ಕಾರದ ಈ ಪ್ರಸ್ತಾವನೆಯನ್ನು ಬೆಂಬಲಿಸಿ ರಾಜ್ಯದ ರೈತರು ವಾಣಿಜ್ಯ ಬ್ಯಾಂಕ್ಗಳಿಂದ ಪಡೆದಿರುವ ಬೆಳೆ ಸಾಲ ಮನ್ನಾಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.