ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಕ್ಕಳ ಸಹಾಯ ವಾಣಿ 1098 ಜಾರಿಯಲ್ಲಿದ್ದು ಸಾರ್ವಜನಿಕರು ಸಹಾಯವಾಣಿ ಬಳಕೆ ಮಾಡಿಕೊಳ್ಳಲು ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಸ್.ಪಾಲಯ್ಯ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ಸಹಾಯವಾಣಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಕ್ಕಳ ಸಹಾಯ ವಾಣಿ 1098ಯು ಫೆಬ್ರವರಿ 2015 ರಿಂದ ಜಾರಿಯಲ್ಲಿದ್ದು ಇದುವರೆಗೂ 510 ಪ್ರಕರಣಗಳು ದಾಖಲಾಗಿದ್ದು. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಮಕ್ಕಳ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ದೇವನಹಳ್ಳಿ ಹಾಗೂ ಹೊಸಕೋಟೆಯಲ್ಲಿ ಸ್ಪರ್ಶ ಸಂಸ್ಥೆ, ನೆಲಮಂಗಲ ತಾಲ್ಲೂಕಿನಲ್ಲಿ ನೆಮ್ಮದಿ ಸಂಸ್ಥೆ, ದೊಡ್ಡಬಳ್ಳಾಪುರದಲ್ಲಿ ಗ್ರಾಮೀಣಾ ಅಭ್ಯುದಯ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಸಂಕಷ್ಠದಲ್ಲಿರುವ ಮಕ್ಕಳು ಅಂದರೆ ಬಾಲಕಾರ್ಮಿಕ, ಚಿಂದಿಆಯುವ, ಲೈಂಗಿಕ ಶೋಷಣೆಗೆ ಒಳಪಟ್ಟ ಮಕ್ಕಳು, ದೈಹಿಕ ದೌರ್ಜನ್ಯಕ್ಕೆ ಒಳಪಟ್ಟ ಮಕ್ಕಳು, ಬಾಲ್ಯವಿವಾಹಕ್ಕೆ ಒಳಪಟ್ಟ ಮಕ್ಕಳು, ಮನೆ ಬಿಟ್ಟು ಓಡಿ ಬಂದ ಮಕ್ಕಳು, ಇತರೆ ಯಾವುದೇ ಸಂಕಷ್ಠದಲ್ಲಿರುವ ಮಕ್ಕಳನ್ನು ಕಂಡರೆ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ತಿಳಿಸಿದರೆ ಇಲಾಖಾ ಅಧಿಕಾರಿಗಳು ಮತ್ತು ಮಕ್ಕಳ ಸಹಾಯವಾಣಿಯ ತಂಡಗಳು ಮಗುವಿನ ರಕ್ಷಣೆಗೆ ಮುಂದಾಗಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೀಶ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಧಿಕಾರಿಗಳು ಹಾಗೂ ಸ್ಪರ್ಷ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು.