ಬೆಂಗಳೂರು: ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಕ್ಕೆ ಪರವಾನಗಿ ನೀಡಲು ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಕನಿಷ್ಟ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ರಸಗೊಬ್ಬರ ನಿಯಂಯ್ರಣ ಆದೇಶ ಮತ್ತು ಕೀಟನಾಶಕ ನಿಯಮಗಳನ್ವಯ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವ್ವಾಮಿಯವರು ಕೃಷಿ ಇಲಾಖೆಯಿಂದ ರಸಗೊಬ್ಬರ ಮತ್ತು ಕೀಟ ನಾಶಕ ಔಷಧಿಗಳ ಅಂಗಡಿಗಳನ್ನು ತೆರೆಯಲು ಅಳವಡಿಸಲಾಗಿರುವ ನಿಯಮಗಳೇನು ಹಾಗೂ ಸದರಿ ಅಂಗಡಿಗಳನ್ನು ತೆರೆಯಲು ಮಾಲೀಕರಿಗೆ ನಿಗಧಿಪಡಿಸಲಾದ ವಿದ್ಯಾರ್ಹತೆಗಳೇನು? ಎಂದು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಅಂಗೀಕೃತ ವಿಶ್ವವಿದ್ಯಾನಿಲಯ, ಸಂಸ್ಥೆಗಳಿಂದ ಬಿಎಸ್ಸಿ(ಕೃಷಿ) ಪದವಿ ಅಥವಾ ಬಿ.ಎಸ್ಸಿ(ರಸಾಯನ ಶಾಸ್ತ್ರ) ಅಥವಾ ಡಿಪ್ಲೊಮೊ(ಕೃಷಿ ವಿಜ್ಞಾನ) National Institute of Agricultural Extension Management(manage) and NIPHM ಮತ್ತು ಇತರೆ ಸರ್ಕಾರಿ ಅಂಗೀಕೃತ ಸಂಸ್ಥೆಗಳು ಕೃಷಿ ಪರಿಕರಗಳ ಮೇಲೆ ನೀಡುವ ಕನಿಷ್ಠ 6 ತಿಂಗಳಿನ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡಿರಬೇಕು ಎಂದು ಕೃಷಿ ಸಚಿವರು ಉತ್ತರ ನೀಡಿದ್ದಾರೆ.
ಕೇಂದ್ರ ಸರ್ಕರದ ಪತ್ರ ಸಂ:3-20/2015 ದಿನಾಂಕ 18-10-2016ರನ್ವಯ ಈ ವಿದ್ಯಾರ್ಹತೆಯು ಹೊಸದಾಗಿ ಪರವಾನಗಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ಚಿಲ್ಲರೆ ಮಾರಾಟಗಾರರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಈಗಾಗಲೇ ಪರವಾನಗಿಯನ್ನು ಹೊಂದಿರುವ ಪರವಾನಗಿದಾರರಿಗೆ ಪರವಾನಗಿಯ ನವೀಕರಣದ ಸಮಯದಲ್ಲಿ ಮೇಲ್ಕಂಡ ವಿದ್ಯಾರ್ಹತೆಯ ವಿನಾಯಿತಿಯನ್ನು ನೀಡಲಾಗಿರುತ್ತದೆ ಎಂದು ಕೃಷ್ಣ ಬೈರೇಗೌಡ ಅವರು ಲಿಖಿತ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಅಧಿಸೂಚನೆ ಸಂಖ್ಯೆ ದಿನಾಂಕ 1-2-2017, ಕೀಟನಾಶಕ(ಎರಡನೇ ತಿದ್ದುಪಡಿ) ನಿಯಮ, 2017 ರನ್ವಯ ಪರವಾನಿಗೆ ಪಡೆಯಲು ವಿದ್ಯಾರ್ಹತೆಯನ್ನು ಹೊಂದಿರುವವರನ್ನು ನೇಮಕ ಮಾಡಿಕೊಳ್ಳಬೇಕು. ಕೃಷಿ ವಿಜ್ಞಾನಗಳಲ್ಲಿ ಪದವಿ ಅಥವಾ ಜೀವರಸಾಯನ ಶಾಸ್ತ್ರ, ಜೈವಿಕತಂತ್ರಜ್ಞಾನ ಅಥವಾ ಜೀವ ವಿಜ್ಞಾನ ಅಥವಾ ವಿಜ್ಞಾನದ ಪದವಿಯೊಂದಿಗೆ ರಸಾಯನಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಡೆದಿರಬೇಕು ಎಂದು ಅವರು ತಿಳಿಸಿದ್ದಾರೆ.
ಅಥವಾ ಮಾನ್ಯತೆ ಮಾಡಿದ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಒಂದು ವರ್ಷದ ಕೃಷಿ ಅಥವಾ ತೋಟಗಾರಿಕೆ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮೊ ಪಡೆದು ಸಸ್ಯ ಸಂರಕ್ಷಣೆ ಮತ್ತು ಪೀಡೆ ನಾಶಕಗಳ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿರಬೇಕು ಎಂದು ಕೃಷಿ ಸಚಿವರು ವಿವರ ನೀಡಿದ್ದಾರೆ.