ಬೆಂಗಳೂರು: ವಿಜಯ್ ಮಲ್ಯ ಪರ ವಕೀಲರಿಗೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದ್ದು, ‘ಸಾಲ ಮರುಪಾವತಿಗೆ ಸಂಬಂಧಿಸಿ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶಕ್ಕೆ ತಡೆ ನೀಡುವ ಮುನ್ನ ಒಂದಷ್ಟು ಮೊತ್ತ ಠೇವಣಿ ಇರಿಸುವ ಬಗ್ಗೆ ಚಿಂತಿಸಿ’ ಎಂದು ಹೇಳಿದೆ.
ಬುಧವಾರ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಯುನೈಟೆಡ್ ಬ್ರಿವೆರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಎಚ್ಎಲ್) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿತು.
ನ್ಯಾಯಪೀಠಕ್ಕೆ ಯುಬಿಎಚ್ಎಲ್ ಪರ ವಕೀಲರು ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಏಕಕಂತಿನ ತೀರುವಳಿ (ಒಟಿಎಸ್) ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.