ಬೆಂಗಳೂರು: ಬೆಳ್ಳಂದೂರು ಹಾಗೂ ವರ್ತೂರು ಕೆರೆ ನೊರೆ ಹಾಗೂ ಬೆಂಕಿ ಸಮಸ್ಯೆ ಕಳೆದೆರಡು ವರ್ಷಗಳಿಂದಿದ್ದು, ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ಸಮಗ್ರ ಅಧ್ಯಯನ ನಡೆಸಿದ್ದು ನೀರಿನಲ್ಲಿರುವ ರಂಜಕದ ಅಂಶವೇ ಬೆಂಕಿಗೆ ಕಾರಣವೆಂದು ತಿಳಿಸಿದ್ದಾರೆ.
ಕೆರೆಗೆ ಭಾರಿ ಪ್ರಮಾಣದ ತ್ಯಾಜ್ಯ ನೀರು ಸೇರುತ್ತಿದೆ. ಇದರಲ್ಲಿ ರಂಜಕ, ಸಾರಜನಕ ಹಾಗೂ ಇಂಗಾಲದ ಅಂಶ ಹೆಚ್ಚಾಗಿದೆ. ಡಿಟರ್ಜೆಂಟ್ ಹಾಗೂ ಸಾಬೂನಿನ ಮತ್ತಿತರ ಕಲ್ಮಶಗಳನ್ನು ಹೊಂದಿರುವ ತ್ಯಾಜ್ಯ ನೀರು ಕೆರೆ ಸೇರುತ್ತಿರುವುದರಿಂದ ಕೆರೆಯಲ್ಲಿ ನೊರೆ ಉತ್ಪತ್ತಿಯಾಗುತ್ತಿದೆ. ವಾತಾವರಣದಲ್ಲಿ ವೇಗವಾಗಿ ಬೀಸುವ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ರಂಜಕ ಮಿಶ್ರವಾಗಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಹೀಗೆಯೇ ಮುಂದುವರಿದಲ್ಲಿ ಆ ಭಾಗದ ಅಂತರ್ಜಲವೂ ಕಲುಷಿತಗೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಒಳಚರಂಡಿ ತ್ಯಾಜ್ಯ ನೀರು ಹಾಗೂ ಡಿಟರ್ಜೆಂಟ್ ಅಂಶವುಳ್ಳ ನೀರು ಕೆರೆ ತಲುಪುವುದನ್ನು ತುರ್ತಾಗಿ ನಿಯಂತ್ರಿಸಬೇಕಿದೆ. ತ್ಯಾಜ್ಯ ನೀರಿನಿಂದ ನೀರಿನಲ್ಲಿರುವ ರಂಜಕ ಹಾಗೂ ಸಾರಜನಕದ ಅಂಶಗಳೇ ನೊರೆಗೆ ಹಾಗೂ ಫೆಬ್ರವರಿಯಲ್ಲಿ ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಿದ್ದಾರೆ.