ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿದ ಘಟನೆ ಮಂಗಳವಾರ ನಡೆದಿದೆ.
ಈ ಪ್ರಕರಣ ಸಂಬಂಧ ಒಂಭತ್ತು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಮೈಸೂರಿನ ಶಾಂತರಾಜ್ ಮತ್ತು ಇತರೆ 8 ಮಂದಿ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ರವಿಕುಮಾರ್ ದೂರು ದಾಖಲಿಸಿದ್ದಾರೆ. ಶಾಂತರಾಜ್ ಅವರೂ ಪ್ರತಿ ದೂರು ದಾಖಲಿಸಿದ್ದು, ಸಚಿವರು ತಮ್ಮ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
‘ಸಂಜೆ 4.30ರ ಸುಮಾರಿಗೆ ವಿಧಾನಸೌಧದ ಕೊಠಡಿ ಸಂಖ್ಯೆ 262ಕ್ಕೆ ಬಂದ ಆರೋಪಿಗಳು ಸಚಿವರ ಜೊತೆ ವಾಗ್ವಾದಕ್ಕೆ ಇಳಿದರು. ಅವರಿಗೆ ಧಮಕಿ ಹಾಕಿ, ಪ್ರಾಣ ಬೆದರಿಕೆ ಒಡ್ಡಿದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕಾರಣ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈಚೆಗೆ ಪಿಯು ಉಪನ್ಯಾಸಕರ 1,203 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಸ್ನಾತಕೋತ್ತರ ಪದವಿಯಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಶೇ 55ರಷ್ಟು ಅಂಕ ಪಡೆದಿರಬೇಕು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಈ ಹಿಂದೆ ಶೇ 5ರಷ್ಟು ವಿನಾಯಿತಿ ಇರುತ್ತಿತ್ತು. ಆದರೆ, ಈ ಬಾರಿ ಪಿಯು ಉಪನ್ಯಾಸಕರ ಹುದ್ದೆಗಳಿಗೆ ಎಲ್ಲರಿಗೂ ಸಮಾನ ಅಂಕ ನಿಗದಿ ಮಾಡುವ ಮೂಲಕ ಈ ವರ್ಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಸಚಿವರ ಜೊತೆ ಆರೋಪಿಗಳು ವಾಗ್ವಾದಕ್ಕಿಳಿದಿದ್ದು, ನಂತರ ಮಾತಿಗೆ ಮಾತು ಬೆಳೆದು ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.